ಕರ್ನಾಟಕದಲ್ಲಿ ಕೋವಿಡ್19 ಹೊಸ ದಾಖಲೆ: 41 ಸಾವಿರ ಮೀರಿದ ಸೋಂಕಿತರ ಸಂಖ್ಯೆ, ಮತ್ತೆ 73 ಬಲಿ
ರಾಜ್ಯ ರಾಜಧಾನಿಯಲ್ಲಿ ನಿಲ್ಲದ ಸಾವಿನ ಸರಣಿ; ಒಂದೇ ದಿನ 47 ಮಂದಿ ಸಾವು
ಬೆಂಗಳೂರು, ಜು.13: ಕರ್ನಾಟಕದಲ್ಲಿ ಕೊರೋನ ನಾಗಾಲೋಟ ಮುಂದುವರಿದಿದ್ದು, ಸೋಂಕಿತರ ಸಂಖ್ಯೆ 40 ಸಾವಿರದ ಗಡಿದಾಟಿದೆ. ಕೆಲ ದಿನಗಳಿಂದ ದೈನಂದಿನ 2 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗುತ್ತಿದ್ದು, ಇಂದು 2,738 ಪ್ರಕರಣಗಳೊಂದಿಗೆ ಹೊಸ ದಾಖಲೆ ಸೃಷ್ಟಿಯಾಗಿದೆ.
ರವಿವಾರ ಸಂಜೆಯಿಂದ ಸೋಮವಾರ ಸಂಜೆವರೆಗೆ ಮತ್ತೆ 2,738 ಮಂದಿಗೆ ಕೊರೋನ ವೈರಸ್ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಒಟ್ಟು ಸಂಖ್ಯೆ 41,581 ಕ್ಕೆ ಏರಿಕೆಯಾಗಿದೆ. 24 ಗಂಟೆಗಳಲ್ಲಿ 73 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 757ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಬೆಂಗಳೂರು ನಗರ ಜಿಲ್ಲೆಯಲ್ಲಿ ಕೊರೋನ ಸಾವಿನ ಸರಣಿ ಮುಂದುವರಿದಿದ್ದು, ಇಂದು ಒಂದೇ ದಿನ 47 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಮೈಸೂರು 6, ಧಾರವಾಡ 5, ಶಿವಮೊಗ್ಗ 3, ಬಾಗಲಕೋಟೆ 2, ಕೊಡಗು 2, ಬೆಳಗಾವಿ 2, ಉತ್ತರ ಕನ್ನಡ, ಹಾವೇರಿ, ಹಾಸನ, ಗದಗ, ತುಮಕೂರು, ದಾವಣಗೆರೆಯಲ್ಲಿ ತಲಾ ಒಂದು ಸಾವು ಸಂಭವಿಸಿದೆ.
ಸೋಂಕು ಖಚಿತಗೊಂಡ ಪ್ರಕರಣಗಳ ಪೈಕಿ ಬೆಂಗಳೂರು ನಗರ 1,315, ಯಾದಗಿರಿ 162, ಮೈಸೂರು 151, ದಕ್ಷಿಣ ಕನ್ನಡ 131, ಬಳ್ಳಾರಿ 106, ಕಲಬುರಗಿ 89, ವಿಜಯಪುರ 86, ಶಿವಮೊಗ್ಗ 74, ಧಾರವಾಡ 71, ಉಡುಪಿ 53, ತುಮಕೂರು 48, ರಾಯಚೂರು 45, ದಾವಣಗೆರೆ 45, ಚಿಕ್ಕಬಳ್ಳಾಪುರ 42, ಉತ್ತರ ಕನ್ನಡ 37, ಬಾಗಲಕೋಟೆ 37, ಕೊಪ್ಪಳ 31, ಮಂಡ್ಯ 30, ಕೊಡಗು 29, ಬೆಳಗಾವಿ 27, ಹಾಸನ 25, ಬೀದರ್ 23, ಬೆಂಗಳೂರು ಗ್ರಾಮಾಂತರ 21, ಕೋಲಾರ 21, ಚಿಕ್ಕಮಗಳೂರು 10, ಚಾಮರಾಜನಗರ 9, ಚಿತ್ರದುರ್ಗ 8, ಗದಗ 6, ಹಾವೇರಿಯಲ್ಲಿ 6 ಪ್ರಕರಣ ಪಾಸಿಟಿವ್ ಬಂದಿದೆ.
ಒಟ್ಟಾರೆ ರಾಜ್ಯದಲ್ಲಿ 41,581 ಕೊರೋನ ಸೋಂಕಿತರ ಪೈಕಿ 16,248 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಇದರಲ್ಲಿ ಇಂದು ಒಂದೇ ದಿನ 839 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದಂತೆ ಇದುವರೆಗೆ 757 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, 24,572 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.