ಮೇಕೆದಾಟು ಬಳಿ ಅಣೆಕಟ್ಟು ನಿರ್ಮಾಣ: ರಾಜ್ಯದ ಬೇಡಿಕೆ ಪುರಸ್ಕರಿಸುವಂತೆ ಕೇಂದ್ರಕ್ಕೆ ರಮೇಶ್ ಜಾರಕಿಹೊಳಿ ಮನವಿ
ಹೊಸದಿಲ್ಲಿ, ಜು.15: ಮೇಕೆದಾಟು ಬಳಿ ಸಮಾನಾಂತರ ಅಣೆಕಟ್ಟು ಕಟ್ಟುವ ರಾಜ್ಯ ಸರಕಾರದ ಬೇಡಿಕೆಯನ್ನು ಕೂಡಲೇ ಪುರಸ್ಕರಿಸುವಂತೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ಕೇಂದ್ರದ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ರಿಗೆ ಮನವಿ ಮಾಡಿದರು.
ಬುಧವಾರ ಹೊಸದಿಲ್ಲಿಯಲ್ಲಿ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಮತ್ತು ಸುರೇಶ್ ಅಂಗಡಿ ಜೊತೆ ಜಲಶಕ್ತಿ ಸಚಿವಾಲಯದ ಕಚೇರಿಯಲ್ಲಿ ನಡೆದ ಈ ಭೇಟಿಯ ಸಮಯದಲ್ಲಿ ಬೆಂಗಳೂರು ಮಹಾನಗರಕ್ಕೆ ಕುಡಿಯುವ ನೀರು ಒದಗಿಸಲು ಅನುಕೂಲವಾಗುವಂತೆ 4.75 ಟಿಎಂಸಿ ನೀರನ್ನು ಸದ್ಬಳಕೆ ಮಾಡಿಕೊಳ್ಳುವ ದೃಷ್ಟಿಯಿಂದ ಮೇಕೆದಾಟು ಸಮಾನಾಂತರ ಅಣೆಕಟ್ಟು ನಿರ್ಮಾಣಕ್ಕೆ ಅಗತ್ಯ ಸಹಕಾರ ನೀಡುವಂತೆ ಕೇಂದ್ರ ಸಚಿವರಿಗೆ ರಮೇಶ್ ಜಾರಕಿಹೊಳಿ ಮನವಿ ಮಾಡಿದರು.
ಕೃಷ್ಣಾ ಜಲವಿವಾದಗಳಿಗೆ ಸಂಬಂಧಿಸಿದಂತೆ ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತದ ಅನುಷ್ಠಾನಕ್ಕೆ ಅವಶ್ಯವಿರುವ ಅಧಿಸೂಚನೆಯನ್ನು ಕೂಡಲೇ ಹೊರಡಿಸಬೇಕು. ಅಲ್ಲದೆ, ಭದ್ರಾ ಮೇಲ್ದಂಡೆ ಯೋಜನೆಯನ್ನು ‘ರಾಷ್ಟ್ರೀಯ ಯೋಜನೆ’ಯಾಗಿ ಘೋಷಿಸುವಂತೆಯೂ ಇದೇ ಸಂದರ್ಭದಲ್ಲಿ ಅವರು ಒತ್ತಾಯಿಸಿದರು.
ಇದಕ್ಕೆ ಪೂರಕವಾಗಿ ಸ್ಪಂದಿಸಿದ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ರಾಜ್ಯ ಸರಕಾರದ ಮನವಿಗಳ ಕುರಿತು ಶೀಘ್ರವಾಗಿ ಚರ್ಚಿಸಿ ನಿರ್ಧಾರ ಕೈಗೊಳ್ಳುವ ಭರವಸೆ ನೀಡಿದರು.