ಕೊಪ್ಪ: ಪಿಯು ಸಾಧಕಿ ಅಫ್ರಾಗೆ ಊರಿನ ಸರ್ವಧರ್ಮೀಯರಿಂದ ಸನ್ಮಾನ, ಬಹುಮಾನ
ಕೊಪ್ಪ, ಜು.19: ಇತ್ತೀಚಿಗೆ ಪ್ರಕಟಗೊಂಡ ದ್ವಿತೀಯ ಪಿಯು ಪರೀಕ್ಷೆಯ ಫಲಿತಾಂಶದಲ್ಲಿ ಶೇ.96 ಅಂಕ ಗಳಿಸಿ ಸಾಧನೆ ಮಾಡಿದ ವಿದ್ಯಾರ್ಥಿನಿಯನ್ನು ಊರಿನ ಸರ್ವಧರ್ಮೀಯರು ಸೇರಿ ಸನ್ಮಾನ ಮಾಡಿ, ಲ್ಯಾಪ್ ಟಾಪ್ ಉಡುಗೊರೆಯಾಗಿ ನೀಡಿದ್ದಾರೆ.
ಕೊಪ್ಪದ ಅಫ್ರ ಎಂಬಾಕೆ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ.96 ಅಂಕ ಗಳಿಸಿದ್ದಾಳೆ. ಈಕೆಯ ಸಾಧನೆಯನ್ನು ಗುರುತಿಸಿದ ರಾಘವೇಂದ್ರ ನಗರದ ಪ್ರಸನ್ನ ಸೆರಾವೋ, ಸತೀಶ್ ನಾಯಕ್, ನವೀನ್, ವಿಕ್ರಂ ಶೆಟ್ಟಿ, ಅರ್ಜುನ್ ರವರನ್ನೊಳಗೊಂಡ ತಂಡ ಶಾಲು, ಪ್ರಶಸ್ತಿ ಫಲಕ ನೀಡಿ ಸನ್ಮಾನ ಮಾಡಿತು. ಜೊತೆಗೆ, ಪ್ರೋತ್ಸಾಹದಾಯಕವಾಗಿ ಒಂದು ಲ್ಯಾಪ್ ಟಾಪ್ ಉಡುಗೊರೆಯಾಗಿ ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ವಿದ್ಯಾರ್ಥಿನಿ ಅಫ್ರಾ, "ನನ್ನ ಈ ಯಶಸ್ಸಿಗೆ ಪೋಷಕರೇ ಕಾರಣ. ನನ್ನ ತಂದೆ ತಾಯಿ ಸಹೋದರರು ಮಾತ್ರವಲ್ಲದೇ ಕುಟುಂಬದ ಎಲ್ಲರ ಸಹಕಾರದಿಂದಲೇ ನಾನು ಈ ಸಾಧನೆ ಮಾಡಿದ್ದೇನೆ. ಅವರ ಬೆಂಬಲದಿಂದಲೇ ಈ ಯಶಸ್ಸಿನ ಸ್ಥಾನ ಅಲಂಕರಿಸಿದ್ದೇನೆ" ಎಂದು ತಿಳಿಸಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ನವೀನ್ ಎಂಬವರು, ಇನ್ನು ಮುಂದೆ ಇಂತಹ ಸಾಧನೆಗೈಯುವ ನಮ್ಮ ರಾಘವೇಂದ್ರ ನಗರದ ಎಲ್ಲಾ ವಿದ್ಯಾರ್ಥಿಗಳನ್ನು ಯಾವುದೇ ರಾಜಕೀಯ ಧಾರ್ಮಿಕ ಭಿನ್ನಾಬಿಪ್ರಾಯಗಳಿಲ್ಲದೇ ಸನ್ಮಾನಿಸಲಾಗುವುದು' ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಮಧುಸೂದನ್, ಫೈರೋಝ್, ನಾಗರತ್ನಮ್ಮ, ವಜ್ರ ಶಕ್ತಿ ಪತ್ರಿಕೆಯ ಪ್ರಧಾನ ಸಂಪಾದಕ ಎಚ್.ಕೆ.ಹಂಝ, ನಗರದ ಅಂಬಕ್ಕ ಹಾಗೂ ಸುಂದರಕ್ಕ, ಅರುಣ್ ಸೇರಿ ಹಲವರು ಪಾಲ್ಗೊಂಡಿದ್ದರು
ವರದಿ, ಫೋಟೋ: ಮುಹಮ್ಮದ್ ಸುಫೈದ್ ಕೊಪ್ಪ