ಕಲಬುರಗಿ ವಿಮಾನ ನಿಲ್ದಾಣಕ್ಕೆ ಬಂದ 6 ಕೋಟಿ ರೂ.ವೆಚ್ಚದ ಅಗ್ನಿಶಾಮಕ ವಾಹನ
ಕಲಬುರಗಿ, ಆ.3: ಕಲಬುರಗಿ ಜಿಲ್ಲೆಯ ವಿಮಾನ ನಿಲ್ದಾಣಕ್ಕೆ ಅತ್ಯಾಧುನಿಕ ತಂತ್ರಜ್ಞಾನವುಳ್ಳ 6 ಕೋಟಿ ಮೌಲ್ಯದ ಅಗ್ನಿಶಾಮಕ ವಾಹನ ಸೇರ್ಪಡೆಯಾಗಿದ್ದು, ಸಂಸದ ಡಾ.ಉಮೇಶ್ ಜಾಧವ್ ವಿಮಾನ ನಿಲ್ದಾಣದ ಸೇವೆಗೆ ವಾಹನವನ್ನು ಸಮರ್ಪಣೆ ಮಾಡಿದ್ದಾರೆ.
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು 6 ಕೋಟಿ ರೂ.ವೆಚ್ಚದಲ್ಲಿ ಆಸ್ಟ್ರೇಲಿಯಾದಿಂದ ರೊಸೆನ್ ಬೌರ್ ಎಂಬ ವೊಲ್ವೋ ಕಂಪೆನಿಯ ಅಗ್ನಿಶಾಮಕ ವಾಹನವನ್ನು ಖರೀದಿಸಿ ತಂದಿದ್ದು, ಹೆಚ್ಚು ಉಷ್ಣಾಂಶ, ಶೀತ, ಹೊಗೆ, ಧೂಳಿನಂತಹ ಪ್ರತಿಕೂಲ ವಾತಾವರಣದಲ್ಲೂ ಈ ಅಗ್ನಿಶಾಮಕ ವಾಹನ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಹೊಂದಿದೆ.
ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಸಂಪೂರ್ಣ ಸ್ವಯಂಚಾಲಿತ ವಾಹನ ಇದಾಗಿದ್ದು, ಗರಿಷ್ಠ 121 ಕಿಲೋ ಮೀಟರ್ ವೇಗದಲ್ಲಿ ಚಲಿಸಲಿದೆ. ಅಗ್ನಿ ಅವಘಡ ಸಂಭವಿಸಿದಾಗ 65 ಮೀಟರ್ ದೂರದವರೆಗೆ ನೀರು ಸಿಂಪಡಿಸುವ ಶಕ್ತಿ ಇದಕ್ಕಿದೆ.
ಜೊತೆಗೆ ಟ್ಯಾಂಕರ್ ನಲ್ಲಿ 6 ಸಾವಿರ ಲೀಟರ್ ನೀರು ಸಂಗ್ರಹದ ಸಾಮರ್ಥ್ಯವಿದ್ದು, ಕಾರ್ಯಾಚರಣೆ ವೇಳೆ ಕೆಲವೇ ನಿಮಿಷಗಳಲ್ಲಿ 3 ಸಾವಿರ ಲೀಟರ್ ನೀರು ಹೊರಚಿಮ್ಮಿಸಿ, ಬೆಂಕಿಯ ಜ್ವಾಲೆಯನ್ನು ಶಮನಗೊಳಿಸಲಿದೆ. 800 ಲೀಟರ್ ನೊರೆ ಟ್ಯಾಂಕರನ್ನು ಕೂಡ ಈ ವಾಹನ ಒಳಗೊಂಡಿದೆ. ವಿಮಾನ ನಿಲ್ದಾಣಗಳಂತಹ ಸ್ಥಳಗಳಲ್ಲಿ ಅತೀ ವೇಗವಾಗಿ ವ್ಯಾಪಿಸುವ ಬೆಂಕಿಯನ್ನು ನಂದಿಸಲು ಬಳಸುವ ನೊರೆ ಇದಾಗಿದೆ. ಇಡೀ ಅಗ್ನಿ ಅವಘಡ ಪ್ರದೇಶವನ್ನು ಒಮ್ಮೆಗೆ ನಿಯಂತ್ರಿಸುವ ಹಾಗೂ ವಿಮಾನದ ರನ್ ವೇಗಳಲ್ಲಿ ಚಲಿಸುತ್ತಲೇ ಕಾರ್ಯಾಚರಿಸುವಂತಹ ಸಾಮರ್ಥ್ಯ ಈ ವಾಹನಕ್ಕಿದೆ.