ಪಿಯು ವಿದ್ಯಾರ್ಥಿಗಳಿಗೆ ಯೂಟ್ಯೂಬ್ನಲ್ಲಿ ತರಗತಿ ನಡೆಸಲು ಮುಂದಾದ ಶಿಕ್ಷಣ ಇಲಾಖೆ
ಬೆಂಗಳೂರು, ಆ.14: ಯೂಟ್ಯೂಬ್ ಮೂಲಕ ಪ್ರಸಕ್ತ ಸಾಲಿನ ದ್ವಿತೀಯ ಪಿಯು ತರಗತಿಗಳನ್ನು ನಡೆಸಲು ಪದವಿಪೂರ್ವ ಶಿಕ್ಷಣ ಇಲಾಖೆಯು ಮುಂದಾಗಿದೆ. ಕಾಲೇಜುಗಳು ಇನ್ನೂ ಆರಂಭವಾಗದ ಹಿನ್ನೆಲೆಯಲ್ಲಿ ಇದು ಸಹಕಾರಿಯಾಗಲಿದೆ.
ಪದವಿಪೂರ್ವ ಶಿಕ್ಷಣ ಇಲಾಖೆಯು ದ್ವಿತೀಯ ಪಿಯು ಎಲ್ಲ ಸಂಯೋಜನೆಯ (ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗ) ಅಧ್ಯಾಯಗಳನ್ನು ನುರಿತು ಉಪನ್ಯಾಸಕರು ಬೋಧಿಸಿದ್ದಾರೆ. ಇವುಗಳನ್ನು ರೆಕಾರ್ಡ್ ಮಾಡಿ ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಲಾಗುತ್ತಿದೆ.
ಕಳೆದ ಒಂದು ತಿಂಗಳಿನಿಂದಲೂ ನಮಗೆ ಸಂಬಂಧಿಸಿದ ವಿಷಯಗಳನ್ನು ಬೋಧನೆ ಮಾಡಲಾಗುತ್ತಿದೆ. ನಾನು ಅದರಲ್ಲಿ ಭಾಗಿಯಾಗುತ್ತಿದ್ದು, ನೋಟ್ಸ್ ಅನ್ನು ಕೊಡುತ್ತಿದ್ದಾರೆ. ಇದರಿಂದ ಕಲಿಯಲು ನಮಗೆ ಹೆಚ್ಚು ಸಹಕಾರಿಯಾಗುತ್ತಿದೆ. ಕಾಲೇಜುಗಳಿಲ್ಲದಿದ್ದರೂ, ಆನ್ಲೈನ್ ಮೂಲಕ ಕಲಿಯಲು ಅವಕಾಶ ಕಲ್ಪಿಸಿರುವುದು ಅನುಕೂಲಕಾರಿ ಎಂದು ವಿದ್ಯಾರ್ಥಿಯೊಬ್ಬರು ಹೇಳಿದ್ದಾರೆ.
ನಮ್ಮ ಕಾಲೇಜಿನ ವಾಟ್ಸ್ ಆಪ್ ಗ್ರೂಪ್ಗಳಲ್ಲಿ ಪಿಡಿಎಫ್ ರೂಪದಲ್ಲಿ ನೋಟ್ಸ್ಗಳನ್ನು ಕಳಿಸಿಕೊಡುತ್ತಾರೆ. ವಿಡಿಯೋ ಪಾಠದಲ್ಲಿ ಏನಾದರೂ ಗೊಂದಲ ಅಥವಾ ಅನುಮಾನಗಳಿದ್ದಲ್ಲಿ ನಮ್ಮ ಉಪನ್ಯಾಸಕರನ್ನು ಕೇಳಿ ತಿಳಿದುಕೊಳ್ಳುತ್ತೇವೆ ಎಂದು ಮತ್ತೊಂದು ಕಾಲೇಜಿನ ವಿದ್ಯಾರ್ಥಿ ದೀಪಕ್ ಹೇಳಿದರು.
ವೇಳಾಪಟ್ಟಿ ನಿಗದಿ ಮಾಡಿದ್ದಾರೆ. ಅದರಂತೆ ತರಗತಿಗಳನ್ನು ಕೇಳುತ್ತೇನೆ. ಆ ಸಮಯದಲ್ಲಿ ಪಾಠ ಕೇಳಲು ಸಾಧ್ಯವಾಗದಿದ್ದರೆ, ಉಪನ್ಯಾಸಕರಿಂದ ವಿಡಿಯೊದ ಲಿಂಕ್ ತರಿಸಿಕೊಂಡು ಬಿಡುವಾದಾಗ ನೋಡುತ್ತೇನೆ ಎಂದು ಯಡಿಯೂರಿನ ಸರಕಾರಿ ಕಾಲೇಜಿನ ಸ್ನೇಹ ತಿಳಿಸಿದ್ದಾರೆ.
ಬೆಂಗಳೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಯಲ್ಲಿ ಸರಕಾರಿ 20 ಹಾಗೂ 33 ಅನುದಾನಿತ ಕಾಲೇಜುಗಳಿದ್ದು, ಎಲ್ಲರೂ ಈಗ ಆನ್ಲೈನ್ ತರಗತಿಗಳನ್ನು ಕೇಳುತ್ತಿದ್ದಾರೆ. ಆಯಾ ಕಾಲೇಜುಗಳ ಪ್ರಾಂಶುಪಾಲರು ಹಾಗೂ ವಿಷಯ ಉಪನ್ಯಾಸಕರು ಉಸ್ತುವಾರಿಗಳನ್ನಾಗಿ ಮಾಡಿದ್ದಾರೆ. ಇದು ಬೆಂಗಳೂರಿಗಷ್ಟೇ ಅಲ್ಲದೆ, ರಾಜ್ಯದ ಯಾವುದೇ ಕಾಲೇಜಿನ ವಿದ್ಯಾರ್ಥಿಯಾದರೂ ಯೂಟ್ಯೂಬ್ನಲ್ಲಿ ಪಾಠ ಕೇಳಬಹುದಾಗಿದೆ.
-ಬಿ.ಎಂ.ರಾಜಕುಮಾರ್, ಬೆಂಗಳೂರು ದಕ್ಷಿಣ ಡಿಡಿಪಿಯು