ಮೇಕೆದಾಟು ಯೋಜನೆ: ಕೇಂದ್ರ ಸಚಿವರನ್ನು ಭೇಟಿ ಮಾಡಿದ ರಮೇಶ್ ಜಾರಕಿಹೊಳಿ
ಬೆಂಗಳೂರು, ಸೆ.16: ಮೇಕೆದಾಟು ಯೋಜನೆಗೆ ಕೂಡಲೇ ಒಪ್ಪಿಗೆ ಸೂಚಿಸಿ ಅಧಿಸೂಚನೆ ಹೊರಡಿಸುವಂತೆ ರಾಜ್ಯದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಹೊಸದಿಲ್ಲಿಯ ಜಲಶಕ್ತಿ ಮಂತ್ರಾಲಯದಲ್ಲಿ ನಡೆದ ಈ ಭೇಟಿಯ ವೇಳೆ, ಮೇಕೆದಾಟು ಯೋಜನೆಯ ಶೀಘ್ರ ಅನುಷ್ಠಾನ ಕುರಿತು ಕೇಂದ್ರ ಸಚಿವರನ್ನು ಒತ್ತಾಯಿಸಿದ ರಮೇಶ್ ಜಾರಕಿಹೊಳಿ, ಹಾಗೆಯೇ ಕೃಷ್ಣ ನದಿ ನೀರು ಹಂಚಿಕೆ ಮತ್ತು ಆಲಮಟ್ಟಿ ಅಣೆಕಟ್ಟೆ ಎತ್ತರಕ್ಕೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸುವಂತೆಯೂ ಮನವಿ ಮಾಡಿದರು.
ಕಳಸಾ ಬಂಡೂರಿ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಿದ ಅವರು, ಭದ್ರಾ ಮೇಲ್ದಂಡೆ ಯೋಜನೆಯನ್ನು ‘ರಾಷ್ಟ್ರೀಯ ಯೋಜನೆ’ಯನ್ನಾಗಿ ಘೋಷಿಸುವಂತೆ ಶೇಖಾವತ್ ಅವರಿಗೆ ಒತ್ತಾಯಿಸಿದರು.
ಸಭೆಯಲ್ಲಿ ಜಲಸಂಪನ್ಮೂಲ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜೈಪ್ರಕಾಶ್ ಉಪಸ್ಥಿತರಿದ್ದರು.
Next Story