ಕರಾವಳಿ, ಉತ್ತರ ಒಳನಾಡಿನಲ್ಲಿ ಸೆ.29 ರವರೆಗೆ ಮಳೆ ಸಾಧ್ಯತೆ
ಬೆಂಗಳೂರು, ಸೆ.25: ಉತ್ತರ ಒಳನಾಡಿನಲ್ಲಿ ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಸೆ.25 ಹಾಗೂ 29 ರವರೆಗೆ ಬಹುತೇಕ ಎಲ್ಲಾ ಸ್ಥಳಗಳಲ್ಲಿ ಮಳೆಯಾಗಲಿದೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆಯ ಪ್ರಾದೇಶಿಕ ವಿಭಾಗದ ನಿರ್ದೇಶಕರಾದ ಸಿ.ಎಸ್.ಪಾಟೀಲ್ ತಿಳಿಸಿದ್ದಾರೆ.
ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಿದ್ದು, ಒಳನಾಡಿನಲ್ಲಿ ಬಹುತೇಕ ಎಲ್ಲಾ ಸ್ಥಳಗಳಲ್ಲಿ ಹಾಗೂ ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಮಾತ್ರ ಮಳೆಯಾಗಿದೆ. ಕಾರವಾರದಲ್ಲಿ 10 ಸೆಂ.ಮೀ, ಕದರ 7 ಸೆಂ.ಮೀ, ಗೋಕರ್ಣ 5 ಸೆಂ.ಮೀ ಮಳೆಯಾಗಿದೆ ಎಂದು ತಿಳಿಸಿದರು.
ಬೀದರ್, ಕಲಬುರಗಿ, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಯ ಕೆಲವು ಕಡೆ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಇಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಒಳನಾಡಿನಲ್ಲಿ ಸೆ.25 ರಿಂದ 29 ರವರೆಗೆ ಹಗುರದಿಂದ ಸಾಧಾರಣವಾಗಿ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಸೆ.25, 26 ರಂದು ಹಗುರವಾಗಿ ಮಳೆಯಾಗಬಹುದು ಎಂದು ಸಿ.ಎಸ್ ಪಾಟೀಲ್ ತಿಳಿಸಿದ್ದಾರೆ.