ಯೋಧನ ಪತ್ನಿ ನಿಗೂಢ ಸಾವು
ಬೆಂಗಳೂರು, ಎ.21: ಯೋಧನ ಪತ್ನಿಯೊಬ್ಬರು ನೇಣುಬಿಗಿದ ಸ್ಥಿತಿಯಲ್ಲಿ ನಿಗೂಢವಾಗಿ ಮೃತಪಟ್ಟಿರುವ ದುರ್ಘಟನೆ ಇಲ್ಲಿನ ಬ್ಯಾಟರಾಯನಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕುಣಿಗಲ್ ತಾಲೂಕಿನ ರಾಮದೇವರಹಳ್ಳಿಯ ಆಶಾ (24) ಎಂಬುವರು ನಿಗೂಢವಾಗಿ ಸಾವನ್ನಪ್ಪಿರುವ ಯೋಧನ ಪತ್ನಿಯಾಗಿದ್ದು, ಈಕೆ ಎರಡು ತಿಂಗಳ ಬಾಣಂತಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕಳೆದ ಎರಡು ವರ್ಷಗಳ ಹಿಂದೆ ಗುಜರಾತ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ಯೋಧ ಮೋಹನ್ಕುಮಾರ್ ಎಂಬುವರೊಂದಿಗೆ ಆಶಾ ವಿವಾಹವಾಗಿದ್ದು, ದಂಪತಿಗೆ 11 ತಿಂಗಳ ಮಗುವಿದೆ. ನಗರದ ಟಿಂಬರ್ ಯಾರ್ಡ್ ಲೇಔಟ್ ಎಂಆರ್ ಬಾರ್ ಹಿಂಭಾಗ ವಾಸವಿರುವ ಅಣ್ಣ ರಾಮಲಿಂಗ ಅವರ ಮನೆಯಲ್ಲಿ ಮೋಹನ್ ಹಾಗೂ ಆಶಾ ತಂಗಿದ್ದರು.
ಗುರುವಾರ ರಾತ್ರಿ 8:30ರ ಸುಮಾರಿಗೆ ದಂಪತಿ ನಡುವೆ ಜಗಳವಾಗಿದ್ದು, ಆಶಾ ತನ್ನ ಅಣ್ಣ ಅಜಯ್ಗೆ ಕರೆ ಮಾಡಿ ಪತಿ ತನ್ನ ಮೇಲೆ ಹಲ್ಲೆ ಮಾಡುತ್ತಿರುವ ಬಗ್ಗೆ ತಿಳಿಸಿದ್ದಾರೆ. ಆನಂತರ ಆಶಾ ಅವರ ದೇಹ ಫ್ಯಾನ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬಳಿಕ ಆಶಾ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು ಆಕೆ ಮೊದಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಆರೋಪ: ವರದಕ್ಷಿಣೆಗಾಗಿ ಪತಿ ಮೋಹನ್, ಆಶಾಗೆ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಿರುವ ಕುಟುಂಬಸ್ಥರು, ಆತನೆ ಕೊಲೆ ಮಾಡಿ ಶವಕ್ಕೆ ನೇಣು ಬಿಗಿದಿರಬೇಕೆಂದು ಆಪಾದಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಬ್ಯಾಟರಾಯನಪುರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.