ಪ್ರತ್ಯೇಕ ಅಪಘಾತ: ಇಬ್ಬರ ಸಾವು
ಶಿವಮೊಗ್ಗ, ಮೇ 22: ಜಿಲ್ಲೆಯ ತೀರ್ಥಹಳ್ಳಿ ಹಾಗೂ ಸಾಗರದಲ್ಲಿ ನಡೆದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಈರ್ವರು ಮೃತಪಟ್ಟು, ಓರ್ವ ಗಾಯಗೊಂಡಿರುವ ಘಟನೆ ಸೋಮವಾರ ವರದಿಯಾಗಿದೆ. ತೀರ್ಥಹಳ್ಳಿ ವರದಿ: ಮರಳು ಸಾಗಣೆ ಮಾಡುವ ಲಾರಿಯೊಂದು ರಸ್ತೆ ಬದಿಯ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಲಾರಿ ಚಾಲಕ ಮೃತಪಟ್ಟ ಘಟನೆ ತಾಲೂಕಿನ ಕೋಣಂದೂರು ಸಮೀಪದ ಗುಡ್ಡೇಕೊಪ್ಪ ಬಳಿ ವರದಿಯಾಗಿದೆ.
ರಿಪ್ಪನ್ಪೇಟೆಯ ಪ್ರವೀಣ್ (19) ಮೃತಪಟ್ಟ ಚಾಲಕ ಎಂದು ಗುರುತಿಸಲಾಗಿದೆ. ಅಜಾಗರೂಕ, ವೇಗದ ಚಾಲನೆಯೇ ಅವಘಡಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಈ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಗರ ವರದಿ: ತಾಲೂಕಿನ ಆನಂದಪುರ ಸಮೀಪದ ಅಚಾಪುರ ಬಳಿ ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಢಿಕ್ಕಿಯಲ್ಲಿ ಬೈಕ್ನಲ್ಲಿದ್ದ ಓರ್ವ ಮೃತಪಟ್ಟು, ಮತ್ತೋರ್ವ ಗಾಯಗೊಂಡಿರುವ ಘಟನೆ ವರದಿಯಾಗಿದೆ. ಫರ್ಮಾನ್ ಮೃತಪಟ್ಟವರೆಂದು ಗುರುತಿಸಲಾಗಿದೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story