ಪೊಲೀಸ್ ಪೇದೆ ಮೇಲೆ ಹಲ್ಲೆ: ನಾಲ್ವರ ಬಂಧನ
ಮಡಿಕೇರಿ, ಮೇ 22: ರಾತ್ರಿ ವೇಳೆ ಗಸ್ತಿನಲ್ಲಿದ್ದ ಪೊಲೀಸ್ ಪೇದೆ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ ಘಟನೆ ತಡರಾತ್ರಿ ಸೋಮವಾರಪೇಟೆ ಪಟ್ಟಣದಲ್ಲಿ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಇಲ್ಲಿನ ಠಾಣೆಯ ಸಿಬ್ಬಂದಿ ಸಿದ್ದರಾಮ ಎಂಬವರು ಗೃಹರಕ್ಷಕ ಸಿಬ್ಬಂದಿ ಅರುಣ್ ಎಂಬವರೊಂದಿಗೆ ರಾತ್ರಿ 1 ಗಂಟೆ ಸುಮಾರಿಗೆ ಕಕ್ಕೆಹೊಳೆ ಜಂಕ್ಷನ್ ಬಳಿ ಗಸ್ತಿನಲ್ಲಿದ್ದರು. ಈ ವೇಳೆ ಬೈಕ್ನಲ್ಲಿ ಆಗಮಿಸಿದ ದುಷ್ಕರ್ಮಿಗಳಾದ ತಾಕೇರಿ ಗ್ರಾಮದ ಪುನೀತ್, ಮಾಟ್ನಳ್ಳಿ ಗ್ರಾಮದ ದರ್ಶನ್, ತಾಕೇರಿಯ ಸಂಕೇತ್, ತಲ್ತರೆಶೆಟ್ಟಳ್ಳಿಯ ದರ್ಶನ್, ಅಭಿಮಠ ಬಾಚಳ್ಳಿಯ ಆದರ್ಶ್, ತಾಕೇರಿಯ ಚೇತನ್ ಅವರು ಪೊಲೀಸ್ ಪೇದೆಯೊಂದಿಗೆ ಜಗಳ ತೆಗೆದು, ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಸಿಬ್ಬಂದಿ ಸಿದ್ದರಾಮ ಅವರು ನೀಡಿದ ದೂರಿನ ಮೇರೆ ಸೋಮವಾರ ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಅಭಿಮಠ ಬಾಚಳ್ಳಿಯ ಆದರ್ಶ್ ಹಾಗೂ ತಾಕೇರಿಯ ಚೇತನ್ತಲೆಮರೆಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಮೇರೆ ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.