ಬೆಂಗಳೂರಿನಲ್ಲಿ 1ಲಕ್ಷ ಮನೆ ನಿರ್ಮಾಣಕ್ಕೆ ಸಚಿವ ಸಂಪುಟ ಅಸ್ತು
ಬೆಂಗಳೂರು, ಸೆ.27: ಉದ್ಯಾನನಗರಿ ಬೆಂಗಳೂರಿನಲ್ಲಿ ಒಂದು ಲಕ್ಷ ಮನೆ ನಿರ್ಮಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಇಂದು ನಡೆದ ಸಚಿವ ಸಂಪುಟದ ಸಭೆಯ ಬಳಿಕ ಕಾನೂನು ಸಚಿವ ಟಿ.ಬಿ. ಜಯಚಂದ್ರ ಸುದ್ದಿಗಾರರಿಗೆ ತಿಳಿಸಿದರು.
ಆರ್ಥಿಕವಾಗಿ ಹಿಂದುಳಿದವರಿಗೆ ಹೌಸಿಂಗ್ ಬೋರ್ಡ್ ಮತ್ತು ಕೊಳಚೆ ನಿರ್ಮೂಲನಾ ಮಂಡಳಿ , ರಾಜೀವ ಗಾಂಧಿ ವಸತಿ ನಿಗಮದ ವತಿಯಿಂದ ಮನೆ ನಿರ್ಮಿಸಲಾಗುವುದು ಎಂದು ಮಾಹಿತಿ ನೀಡಿದರು. 1512 ಪಶುಚಿಕಿತ್ಸಾಲಯಗಳ ಮೇಲ್ದರ್ಜೆಗೇರಿಸಲು ತೀರ್ಮಾನಿಸಲಾಗಿದೆ . ಮೌಢ್ಯ ಪ್ರತಿಬಂಧಕ ಕರಡು ಮಸೂದೆ ಮಂಡನೆಗೆ ಸಚಿವ ಸಂಪುಟ ಅನುಮೋಧನೆ ನೀಡಿದೆ. ಮಸೂದೆಯನ್ನು ಮುಂದಿನ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದರು.
ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನದ ದಿನಾಂಕ ನಿಗದಿಯಾಗಿಲ್ಲ. ದಿನಾಂಕವನ್ನು ಮುಖ್ಯ ಮಂತ್ರಿಯವರು ನಿರ್ಧರಿಸುತ್ತಾರೆ ಎಂದು ಹೇಳಿದರು.
ನಿರ್ವಹಣಾ ಮಂಡಳಿಗೆ ವಿರೋಧ: ನೀರು ನಿರ್ವಹಣಾ ಮಂಡಳಿಯ ನೇಮಕಕ್ಕೆ ಕರ್ನಾಟಕ ವಿರೋಧ ವ್ಯಕ್ತಪಡಿಸಿದೆ ಎಂದು ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ. ಮಂಡಳಿ ರಚನೆ ಸಂಸತ್ತಿನ ಪರಮಾಧಿಕಾರವಾಗಿದೆ. ಈ ಸಂಬಂಧ ಕೇಂದ್ರ ಸರಕಾರಕ್ಕೆ ಅಫಿಡವಿಟ್ ಸಲ್ಲಿಸಲಾಗಿದೆ ಕೃಷ್ಣ ಮೇಲ್ದಂಡೆ 3 ಹಂತದ ಯೋಜನೆಗೆ 51,148 ಕೋಟಿ ರೂ ಮೊತ್ತದ ಪರಿಷ್ಕೃತ ಅಂದಾಜುಪಟ್ಟಿಗೆ ಅನುಮೋದನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.