ಟ್ವೆಂಟಿ-20 ಕ್ರಿಕೆಟ್: ದಕ್ಷಿಣ ಆಫ್ರಿಕಕ್ಕೆ ಭರ್ಜರಿ ಜಯ
ಮಿಲ್ಲರ್ ವೇಗದ ಶತಕ
ಪೊಟ್ಚೆಸ್ಟ್ರೋಮ್, ಅ.30:ಇಲ್ಲಿ ನಡೆದ ಎರಡನೆ ಹಾಗೂ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಡೇವಿಡ್ ಮಿಲ್ಲರ್ ವೇಗದ ಶತಕದ ನೆರವಿನಲ್ಲಿ ಬಾಂಗ್ಲಾದೇಶ ವಿರುದ್ಧ ದಕ್ಷಿಣ ಆಫ್ರಿಕ 83 ರನ್ಗಳ ಜಯ ಗಳಿಸಿದೆ.
ಸ್ನೇವೆಸ್ ಪಾರ್ಕ್ ಕ್ರೀಡಾಂಗಣದಲ್ಲಿ ರವಿವಾರ ನಡೆದ ಪಂದ್ಯದಲ್ಲಿ ಗೆಲುವಿಗೆ 225 ರನ್ಗಳ ಸವಾಲನ್ನು ಪಡೆದ ಬಾಂಗ್ಲಾದೇಶ ತಂಡ 18.3 ಓವರ್ಗಳಲ್ಲಿ 141 ರನ್ಗಳಿಗೆ ಆಲೌಟಾಗಿದೆ. ಈ ಗೆಲುವಿನೊಂದಿಗೆ ದಕ್ಷಿಣ ಆಫ್ರಿಕ ಎರಡು ಪಂದ್ಯಗಳ ಸರಣಿಯಲ್ಲಿ 2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಸಾಧಿಸಿದೆ.
ದಕ್ಷಿಣ ಆಫ್ರಿಕದ ಸಂಘಟಿತ ದಾಳಿಯ ಮುಂದೆ ಸೌಮ್ಯ ಸರ್ಕಾರ್ (44) ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದರು. ಇವರನ್ನು ಹೊರತುಪಡಿಸಿದರೆ ಮಹಮ್ಮದುಲ್ಲಾ (24), ಮುಹಮ್ಮದ್ ಸೈಫುದ್ದೀನ್(23), ಮಹೆದಿ ಹಸನ್(13) ಎರಡಂಕೆಯ ಸ್ಕೋರ್ ದಾಖಲಿಸಿದರು.
►35 ಎಸೆತಗಳಲ್ಲಿ ಮಿಲ್ಲರ್ ಶತಕ: ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ದಕ್ಷಿಣ ಆಫ್ರಿಕ ತಂಡ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 224 ರನ್ ಗಳಿಸಿತ್ತು. ಡೇವಿಡ್ ಮಿಲ್ಲರ್ ಔಟಾಗದೆ 101(36ಎ, 7ಬೌ,9ಸಿ) , ಹಾಶಿಮ್ ಅಮ್ಲ 85 (51ಎ, 11ಬೌ,1ಸಿ) ಮತ್ತು ಎಬಿಡಿ ವಿಲಿಯರ್ಸ್ 20 ರನ್ ಗಳಿಸಿದರು.
ಮಿಲ್ಲರ್ 35 ಎಸೆತಗಳಲ್ಲಿ 7 ಬೌಂಡರಿ ಮತ್ತು 9 ಸಿಕ್ಸರ್ ನೆರವಿನಲ್ಲಿ ವೇಗದ ಶತಕ ದಾಖಲಿಸಿದರು.
ಆರಂಭದಲ್ಲಿ 14 ಎಸೆತಗಳಲ್ಲಿ 18 ರನ್ ಮಾಡಿದ್ದ ಮಿಲ್ಲರ್ ಬಳಿಕ 21 ಎಸೆತಗಳಲ್ಲಿ 82 ರನ್ಗಳಿಸಿದರು. ಅವರು 23 ಎಸೆತಗಳಲ್ಲಿ 5ಬೌಂಡರಿ ಮತ್ತು 3 ಸಿಕ್ಸರ್ ನೆರವಿನಲ್ಲಿ ಅರ್ಧಶತಕ ದಾಖಲಿಸಿದ್ದರು.
ಆಲ್ರೌಂಡರ್ ಮುಹಮ್ಮದ್ ಸೈಫುದ್ದೀನ್ ಅವರು 19ನೆ ಓವರ್ನಲ್ಲಿ ಕೈ ಸುಟ್ಟುಕೊಂಡರು. ಸೈಫುದ್ದೀನ್ ಓವರ್ನ ಮೊದಲ 5 ಎಸೆತಗಳಲ್ಲಿ ಮಿಲ್ಲರ್ ಸತತ ಸಿಕ್ಸರ್ ಸಿಡಿಸಿದರು. ಕೊನೆಯ ಎಸೆತದಲ್ಲಿ 1 ರನ್ ಗಳಿಸಿದರು. ಒಟ್ಟು 31 ರನ್ ಕಬಳಿಸಿದ ಮಿಲ್ಲರ್ಗೆ ಟ್ವೆಂಟಿ-20 ಕ್ರಿಕೆಟ್ನಲ್ಲಿ ಯುವರಾಜ್ ದಾಖಲಿಸಿದ್ದ ಒಂದೇ ಓವರ್ನಲ್ಲಿ 6 ಸಿಕ್ಸರ್ಗಳ ದಾಖಲೆಯನ್ನು ಸರಿಗಟ್ಟಲು ಸಾಧ್ಯವಾಗಲಿಲ್ಲ.
ಸೈಪುದ್ದೀನ್ ಅವರು ಮೊದಲ 3 ಓವರ್ಗಳಲ್ಲಿ 22 ರನ್ ನೀಡಿ ಎಬಿಡಿ ವಿಲಿಯರ್ಸ್ ಮತ್ತು ಅಮ್ಲ ವಿಕೆಟ್ ಉಡಾಯಿಸಿದ್ದರು. ಆದರೆ ಕೊನೆಯ ಓವರ್ನಲ್ಲಿ ಮಿಲ್ಲರ್ ಅವರಿಂದ ಚೆನ್ನಾಗಿ ದಂಡಿಸಿಕೊಂಡರು. ಒಂದೇ ಓವರ್ನಲ್ಲಿ 31 ರನ್ ನೀಡಿದರು.ಸೈಫುದ್ದೀನ್ 4 ಓವರ್ಗಳಲ್ಲಿ 53 ರನ್ ನೀಡಿದರು.
ದಕ್ಷಿಣ ಆಫ್ರಿಕದ ರಿಚರ್ಡ್ ಲೆವಿ ಅವರು 2012, ಫೆ.19ರಂದು ಹ್ಯಾಮಿಲ್ಟನ್ನಲ್ಲಿ ನ್ಯೂಝಿಲೆಂಡ್ ವಿರುದ್ಧದ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ 45 ಎಸೆತಗಳಲ್ಲಿ ಶತಕ ದಾಖಲಿಸಿದ್ದರು. ಈ ದಾಖಲೆಯನ್ನು ಮಿಲ್ಲರ್ ಮುರಿದರು. ಟ್ವೆಂಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಶತಕ ದಾಖಲಿಸಿದ ದಕ್ಷಿಣ ಆಫ್ರಿಕದ ನಾಲ್ಕನೆ ಆಟಗಾರ ಎನಿಸಿಕೊಂಡಿದ್ದಾರೆ. 28ರ ಹರೆಯದ ಮಿಲ್ಲರ್ 57 ಟ್ವೆಂಟಿ-20 ಪಂದ್ಯಗಳ 49 ಇನಿಂಗ್ಸ್ಗಳಲ್ಲಿ 1,032 ರನ್ ಪೂರೈಸಿದ್ದಾರೆ. ಮಿಲ್ಲರ್ 4ನೆ ವಿಕೆಟ್ಗೆ ಅಮ್ಲ ಜೊತೆ 41 ಎಸೆತಗಳಲ್ಲಿ 79 ರನ್ಗಳ ಜೊತೆಯಾಟ ನೀಡಿದರು. ಬಾಂಗ್ಲಾ ಮೊದಲ 5 ಓವರ್ಗಳಲ್ಲಿ 37 ರನ್ಗಳನ್ನು ಬಿಟ್ಟುಕೊಟ್ಟು ದಕ್ಷಿಣ ಆಫ್ರಿಕದ ಎರಡು ವಿಕೆಟ್ ಉಡಾಯಿಸಿತ್ತು. ಬಳಿಕ ಹಿಡಿತ ಸಡಿಲಗೊಂಡಿತು.ಆಫ್ರಿಕದ ದಾಂಡಿಗರು ರನ್ ಹೊಳೆ ಹರಿಸಿದರು.
ಸಂಕ್ಷಿಪ್ತ ಸ್ಕೋರ್ ವಿವರ
►ದಕ್ಷಿಣ ಆಫ್ರಿಕ 20 ಓವರ್ಗಳಲ್ಲಿ 224/4
( ಮಿಲ್ಲರ್ ಔಟಾಗದೆ 101, ಅಮ್ಲ 85; ಶಾಕಿಬ್ ಅಲ್ ಹಸನ್ 22ಕ್ಕೆ 2)
►ಬಾಂಗ್ಲಾದೇಶ 18.3 ಓವರ್ಗಳಲ್ಲಿ ಆಲೌಟ್ 141(ಸೌಮ್ಯ ಸರ್ಕಾರ್ 44; ಫ್ಯಾಂಗಿಸೊ 31ಕ್ಕೆ 2, ಡುಮಿನಿ 23ಕ್ಕೆ 2).
►ಪಂದ್ಯಶ್ರೇಷ್ಠ: ಡೇವಿಡ್ ಮಿಲ್ಲರ್
►ಸರಣಿ ಶ್ರೇಷ್ಠ: ಡೇವಿಡ್ ಮಿಲ್ಲರ್