ಪಿಎಸ್ಎಲ್: ಯಾರಿಗೂ ಬೇಡವಾದ ಗೇಲ್
ಕರಾಚಿ, ನ.13: ವೆಸ್ಟ್ಇಂಡೀಸ್ನ ಸ್ಫೋಟಕ ಬ್ಯಾಟ್ಸ್ಮನ್ ಕ್ರಿಸ್ ಗೇಲ್ ಪಾಕಿಸ್ತಾನ ಸೂಪರ್ ಲೀಗ್ನಲ್ಲಿ(ಪಿಎಸ್ಎಲ್)ಯಾರಿಗೂ ಬೇಡವಾಗಿದ್ದಾರೆ. 2018ನೆ ಆವೃತ್ತಿಯ ಪಿಎಸ್ಎಲ್ ಟೂರ್ನಿಗೆ ನಡೆದ ಆಟಗಾರರ ಹರಾಜಿನಲ್ಲಿ ಯಾವುದೇ ಫ್ರಾಂಚೈಸಿ ಅವರನ್ನು ಖರೀದಿಸಲಿಲ್ಲ.
ರವಿವಾರ ನಡೆದ ಪಿಎಸ್ಎಲ್ಗೆ ಆಟಗಾರರ ಹರಾಜಿನಲ್ಲಿ 308 ವಿದೇಶಿ ಮತ್ತು 193 ದೇಶೀಯ ಆಟಗಾರರನ್ನು ವಿವಿಧ ತಂಡಗಳಿಗೆ ಸೇರಿಸಿಕೊಳ್ಳಲಾಗಿತ್ತು. ಆದರೆ ಟ್ವೆಂಟಿ-20 ಕ್ರಿಕೆಟ್ನಲ್ಲಿ ಪ್ರಮುಖ ಸ್ಫೋಟಕ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರಾಗಿರುವ ಗೇಲ್ಗೆ ಯಾವುದೇ ತಂಡದಲ್ಲೂ ಸ್ಥಾನ ಸಿಗಲಿಲ್ಲ.
ಟ್ವೆಂಟಿ-20 ಕ್ರಿಕೆಟ್ನಲ್ಲಿ 10 ಸಾವಿರ ರನ್ ಗಳಿಸಿರುವ ಏಕೈಕ ಬ್ಯಾಟ್ಸ್ಮನ್ ಎನಿಸಿಕೊಂಡಿರುವ ಗೇಲ್ ಅವರು ಕಳಪೆ ಫಾರ್ಮ್ ಮತ್ತು ತಂಡದ ಪೂರ್ಣಾವಧಿ ಸೇವೆಗೆ ಲಭ್ಯರಿಲ್ಲದ ಕಾರಣಕ್ಕಾಗಿ ಯಾವುದೇ ತಂಡ ಅವರನ್ನು ಖರೀದಿಸಲು ಆಸಕ್ತಿ ವಹಿಸಲಿಲ್ಲ. ಗೇಲ್ ಕಳೆದ ಆವೃತ್ತಿಯಲ್ಲಿ ಐಪಿಎಲ್ನಲ್ಲೂ ಮಿಂಚಲಿಲ್ಲ. ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ತಂಡದಲ್ಲಿ ಅವರ ಅಟ ಕಳಪೆಯಾಗಿತ್ತು.
ಗೇಲ್ ಮಾತ್ರವಲ್ಲ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಸಲ್ಮಾನ್ ಬಟ್ ಮತ್ತು ಬೌಲರ್ ಮುಹಮ್ಮದ್ ಆಸಿಫ್ರನ್ನು ಯಾವುದೇ ಫಾಂಚೈಸಿ ತಂಡ ಕಣ್ಣೆತ್ತಿಯೂ ನೋಡಲಿಲ್ಲ. ಯಾಕೆಂದರೆ ಬಟ್ ಮತ್ತು ಆಸಿಫ್ 2010ರಲ್ಲಿ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ನಿಷೇಧದ ಸಜೆ ಅನುಭವಿಸಿ ಕ್ರಿಕೆಟ್ ವಾಪಸಾಗಿದ್ದರು. ಬಟ್ ಅವರು ಕ್ರಿಕೆಟ್ಗೆ ವಾಪಸಾಗಿ ದೇಶೀಯ ಕ್ರಿಕೆಟ್ನಲ್ಲಿ ಉತ್ತಮ ಫಾರ್ಮ್ ಕಂಡುಕೊಂಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಾಪಸಾಗುವ ನಿರೀಕ್ಷೆಯಲ್ಲಿದ್ದಾರೆ. ಆಯ್ಕೆ ಸಮಿತಿಯ ಮುಖ್ಯಸ್ಥ ಇಂಝಮಮ್ ಉಲ್ ಹಕ್ ಅವರು ಪಾಕ್ ಕ್ರಿಕೆಟ್ ತಂಡವನ್ನು ಇನ್ನಷ್ಟು ಬಲಿಷ್ಠವಾಗಿ ರೂಪಿಸಲು ಬಟ್ ಅವರನ್ನು ಪಾಕ್ ತಂಡಕ್ಕೆ ಸೇರಿಸಿಕೊಳ್ಳುವ ವಿಚಾರವನ್ನು ದೃಢಪಡಿಸಿದ್ದಾರೆ.
ಗೇಲ್ ಅವರು ಫಾರ್ಮ್ ಕಳೆದುಕೊಂಡಿದ್ದಾರೆ ಮತ್ತು ಅವರು ತಂಡದ ಸೇವೆಗೆ ಪೂರ್ಣಾವಧಿ ಲಭ್ಯರಿಲ್ಲ . ಈ ಎರಡು ಪ್ರಮುಖ ಕಾರಣಕ್ಕಾಗಿ ಗೇಲ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿಲ್ಲ ಎಂದು ತಂಡದ ಮಾಲಕರೊಬ್ಬರು ತಿಳಿಸಿದ್ದಾರೆ.
ಗೇಲ್ ಅವರ ವೆಸ್ಟ್ಇಂಡೀಸ್ ತಂಡ 2019ರ ಐಸಿಸಿ ವಿಶ್ವಕಪ್ಗೆ ನೇರವಾಗಿ ತೇರ್ಗಡೆಯಾಗುವಲ್ಲಿ ವಿಫಲವಾಗಿದೆ. ಅರ್ಹತಾ ಸುತ್ತಿನಲ್ಲಿ ಆಡುವ ಮೂಲಕ ವಿಂಡೀಸ್ ವಿಶ್ವಕಪ್ಗೆ ಅರ್ಹತೆ ಗಿಟ್ಟಿಸಿಕೊಳ್ಳಲು ಪ್ರಯತ್ನಿಸಲಿದೆ. 2018ರಲ್ಲಿ ಪಾಕಿಸ್ತಾನ ಸೂಪರ್ ಲೀಗ್ ಟೂರ್ನಮೆಂಟ್ ನಡೆಯುವ ವೇಳೆ ವಿಶ್ವಕಪ್ನ ಅರ್ಹತಾ ಸುತ್ತಿನ ಪಂದ್ಯಗಳು ನಡೆಯಲಿರುವ ಹಿನ್ನೆಲೆಯಲ್ಲಿ ಗೇಲ್ ತನ್ನ ದೇಶದ ತಂಡದ ಸೇವೆಯಿಂದ ದೂರ ಸರಿದು ಪೂರ್ಣಾವಧಿಯಾಗಿ ಪಿಎಸ್ಎಲ್ನಲ್ಲಿ ತೊಡಗಿಸಿಕೊಳ್ಳಲು ತಯಾರಿಲ್ಲ. ಈ ಕಾರಣದಿಂದಾಗಿ ಗೇಲ್ಗೆ ಬಗ್ಗೆ ಪಿಎಸ್ಎಲ್ ತಂಡಗಳು ಆಸಕ್ತಿ ವಹಿಸಿಲ್ಲ. ಒಂದು ವೇಳೆ ಗೇಲ್ ಪೂರ್ಣಪ್ರಮಾಣದಲ್ಲಿ ಪಾಕಿಸ್ತಾನ ಸೂಪರ್ ಲೀಗ್ಗೆ ಲಭ್ಯರಿದ್ದರೂ ನಾವು ಅವರನ್ನು ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ತಯಾರಿಲ್ಲ. ಯಾಕೆಂದರೆ ಅವರಿಗೆ ಹಿಂದಿನಂತೆ ಆಡಲು ಸಾಧ್ಯವಾಗುತ್ತಿಲ್ಲ’’ ಎಂದು ತಂಡದ ಮಾಲಕರೊಬ್ಬರು ಹೇಳಿದರು.
ಗೇಲ್ ಪಿಎಸ್ಎಲ್ನಲ್ಲಿ ಎರಡು ಆವೃತ್ತಿಗಳಲ್ಲೂ ಚೆನ್ನಾಗಿ ಆಡಲಿಲ್ಲ. ಮೊದಲ ಆವೃತ್ತಿಯ 5 ಪಂದ್ಯಗಳಲ್ಲಿ 103 ರನ್ ಮತ್ತು ಎರಡನೇ ಆವೃತ್ತಿಯಲ್ಲಿ 10 ಪಂದ್ಯಗಳಲ್ಲಿ 160 ರನ್ ಕಲೆ ಹಾಕಿದ್ದರು. ಕಳೆದ ಆವೃತ್ತಿಯಲ್ಲಿ ಗೇಲ್ ಆರ್ಸಿಬಿ ಪರ 9 ಪಂದ್ಯಗಳಲ್ಲಿ ಆಡಿದ್ದರು. ಕೇವಲ 200 ರನ್ ಜಮೆ ಮಾಡಿದ್ದರು.