ಕ್ರಿಕೆಟ್ ಆಸ್ಟ್ರೇಲಿಯ 249/9
ಮಿಂಚಿದ ವೋಕ್ಸ್
ಟೌನ್ಸ್ವಿಲ್, ನ.15: ಇಂಗ್ಲೆಂಡ್ನ ವೇಗಿ ಕ್ರಿಸ್ ವೋಕ್ಸ್ ದಾಳಿಗೆ ತತ್ತರಿಸಿದ ಆತಿಥೇಯ ಕ್ರಿಕೆಟ್ ಆಸ್ಟ್ರೇಲಿಯ ಇಲೆವೆನ್ ತಂಡ ಚತುರ್ದಿನ ಪ್ರದರ್ಶನ ಪಂದ್ಯದಲ್ಲಿ 9 ವಿಕೆಟ್ಗಳ ನಷ್ಟಕ್ಕೆ 249 ರನ್ ಕಲೆ ಹಾಕಿದೆ.
ಮೊದಲ ದಿನವಾದ ಬುಧವಾರ ಆಸ್ಟ್ರೇಲಿಯ ತಂಡಕ್ಕೆ ಕ್ರಿಸ್ ವೋಕ್ಸ್(6-54) ಸವಾಲಾಗಿ ಪರಿಣಮಿಸಿದರು. ಸ್ಟೀವ್ ಫಿನ್ ಹಾಗೂ ಜಾಕ್ ಬಾಲ್ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಇಂಗ್ಲೆಂಡ್ ಬೌಲಿಂಗ್ ದಾಳಿ ದುರ್ಬಲವಾಗಿತ್ತು. ಇದೀಗ ವೋಕ್ಸ್ ಅತ್ಯುತ್ತಮ ದಾಳಿ ಸಂಘಟಿಸಿ ಬೌಲಿಂಗ್ ವಿಭಾಗಕ್ಕೆ ಬಲ ತುಂಬಿದ್ದಾರೆ. ವೋಕ್ಸ್ ತನ್ನ ಮೊದಲ ಸ್ಪೆಲ್ನಲ್ಲಿ 8 ರನ್ ನೀಡಿ 4 ವಿಕೆಟ್ ಉಡಾಯಿಸಿ ಗಮನ ಸೆಳೆದರು. ಕ್ರಿಸ್ ಒವರ್ಟನ್(2-32) ಹಾಗೂ ಸ್ಟುವರ್ಟ್ ಬ್ರಾಡ್(1-33) ವೋಕ್ಸ್ಗೆ ಉತ್ತಮ ಸಾಥ್ ನೀಡಿದರು.
28ರ ಹರೆಯದ ವೋಕ್ಸ್ ಈ ವರ್ಷ ಕೇವಲ ಒಂದು ಟೆಸ್ಟ್ ಪಂದ್ಯ ಆಡಿದ್ದಾರೆ. ಆದರೆ,ಈ ಹಿಂದೆ ಅವರು ಸ್ಥಿರ ಪ್ರದರ್ಶನ ನೀಡಿದ್ದಾರೆ. ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ವಾಪಸಾಗಿರುವ ಆಫ್-ಸ್ಪಿನ್ನರ್ ಮೊಯಿನ್ ಅಲಿ 16 ಓವರ್ ಬೌಲಿಂಗ್ ಮಾಡಿದರೂ ವಿಕೆಟ್ ಪಡೆಯಲು ವಿಫಲರಾದರು.
ಇಂಗ್ಲೆಂಡ್ನ ವಿಕೆಟ್ಕೀಪರ್ ಜಾನಿ ಬೈರ್ಸ್ಟೊವ್ ಬೆಳಗ್ಗೆ ಫೀಲ್ಡಿಂಗ್ ಮಾಡುವಾಗ ಬೆರಳಿಗೆ ಗಾಯ ಮಾಡಿಕೊಂಡು ಗಾಯದ ಭೀತಿ ಎದುರಿಸಿದರು. ವೈದ್ಯರಿಂದ ಚಿಕಿತ್ಸೆ ಪಡೆದ ಬಳಿಕ ಮೈದಾನಕ್ಕೆ ವಾಪಸಾದರು.