ಅಭಿಮಾನಿಗಳತ್ತ ಶಾರ್ಟ್ಸ್ ಎಸೆದ ಬಫನ್!
ಟುರಿನ್(ಇಟಲಿ), ನ.23: ಫುಟ್ಬಾಲ್ ಆಟಗಾರರು ಪಂದ್ಯ ಕೊನೆಗೊಂಡ ಬಳಿಕ ಸಾಮಾನ್ಯವಾಗಿ ತಮ್ಮ ಅಭಿಮಾನಿಗಳತ್ತ ಜರ್ಸಿ ತೆಗದು ಎಸೆಯುತ್ತಾರೆ. ಆದರೆ, ಜುವೆಂಟಸ್ ತಂಡದ ಗೋಲ್ಕೀಪರ್ ಗಿಯಾನ್ಲುಗಿ ಬಫನ್ ಬುಧವಾರ ನಡೆದ ಬಾರ್ಸಿಲೋನ ವಿರುದ್ಧದ ಚಾಂಪಿಯನ್ಸ್ ಲೀಗ್ ಪಂದ್ಯದ ಕೊನೆಯಲ್ಲಿ ಅಭಿಮಾನಿಗಳತ್ತ ತನ್ನ ಶಾರ್ಟ್ಸ್ನ್ನು(ಚಡ್ಡಿ)ಕಳಚಿ ಎಸೆದು ಅಚ್ಚರಿ ಮೂಡಿಸಿದ್ದಾರೆ.
ಇಟಲಿ ತಂಡ ವಿಶ್ವಕಪ್ಗೆ ಅರ್ಹತೆ ಗಿಟ್ಟಿಸಲು ವಿಫಲವಾದ ತಕ್ಷಣ ಅಂತಾರಾಷ್ಟ್ರೀಯ ಫುಟ್ಬಾಲ್ಗೆ ಕಣ್ಣೀರಿನ ವಿದಾಯ ಹೇಳಿದ ಬಳಿಕ 39ರ ಹರೆಯದ ಬಫನ್ ಇದೇ ಮೊದಲ ಬಾರಿ ಸ್ಪರ್ಧಾತ್ಮಕ ಫುಟ್ಬಾಲ್ ಪಂದ್ಯದಲ್ಲಿ ಆಡಿದ್ದರು. ಜುವೆಂಟಸ್ ಹಾಗೂ ಬಾರ್ಸಿಲೋನ ನಡುವಿನ ಪಂದ್ಯಗೋಲುರಹಿತ ಡ್ರಾಗೊಂಡಿತು. ಬಾರ್ಸಿಲೋನ ಪ್ರಿ-ಕ್ವಾರ್ಟರ್ಫೈನಲ್ಗೆ ತಲುಪಿದರೆ, ಜುವೆಂಟಸ್ ಗುಂಪಿನಲ್ಲಿ 2ನೇ ಸ್ಥಾನ ಪಡೆದಿದೆ.
ಪಂದ್ಯ ಕೊನೆಗೊಂಡ ಬಳಿಕ ಬಾರ್ಸಿಲೋನದ ಇವಾನ್ ರಾಕಿಟಿಕ್ರನ್ನು ಆಲಿಂಗಿಸಿದ ಬಫನ್ ಕಿತ್ತಳೆ ಬಣ್ಣದ ಚಡ್ಡಿ(ಶಾರ್ಟ್ಸ್) ತೆಗೆದು ಕಿಕ್ಕಿರಿದು ನೆರೆದಿದ್ದ ತನ್ನ ಬೆಂಬಲಿಗರತ್ತ ಎಸೆದರು.
‘‘ಇಂದು ರಾತ್ರಿ ನನಗೆ ಸ್ಮರಣೀಯ ದಿನ. ಇಯಾನ್ ರಾಕಿಟಿಕ್ರಂತಹ ಶ್ರೇಷ್ಠ ಚಾಂಪಿಯನ್ರೊಂದಿಗೆ ಆಡುವುದು ಸಂತೋಷ ಹಾಗೂ ಗೌರವದ ವಿಚಾರ’’ ಎಂದು ಬಫನ್ ಹೇಳಿದ್ದಾರೆ.
ಬಫನ್ ಇಟಲಿಯ ಪರ 20 ವರ್ಷಗಳ ಕಾಲ ಆಡಿದ್ದು 175 ಪಂದ್ಯಗಳನ್ನು ಆಡುವುದರೊಂದಿಗೆ ದಾಖಲೆ ನಿರ್ಮಿಸಿದ್ದರು. ರಶ್ಯದಲ್ಲಿ 2018ರಲ್ಲಿ ನಡೆಯಲಿರುವ ವಿಶ್ವಕಪ್ನಲ್ಲಿ ಆರನೇ ಬಾರಿ ಇಟಲಿಯನ್ನು ಪ್ರತಿನಿಧಿಸುವ ಕನಸು ಕಂಡಿದ್ದರು. ಆದರೆ ಇಟಲಿ ತಂಡ ಸ್ವೀಡನ್ ವಿರುದ್ಧ ನಿರ್ಣಾಯಕ ಪ್ಲೇ-ಆಫ್ ಪಂದ್ಯದಲ್ಲಿ 1-0 ಅಂತರದಿಂದ ಸೋತ ಕಾರಣ ವಿಶ್ವಕಪ್ನಿಂದ ಹೊರಗುಳಿದಿತ್ತು. ಇಟಲಿ 60 ವರ್ಷಗಳ ಬಳಿಕ ವಿಶ್ವಕಪ್ನಲ್ಲಿ ಆಡುವುದರಿಂದ ವಂಚಿತವಾಗಿತ್ತು. ಜುವೆಂಟಸ್ ಪರ ಕೊನೆಯ ಬಾರಿ ಆಡುತ್ತಿರುವ ಬಫನ್ ಚಾಂಪಿಯನ್ಸ್ ಲೀಗ್ ಗೆಲ್ಲುವ ಗುರಿ ಹೊಂದಿದ್ದಾರೆ. ಜುವೆಂಟಸ್ ಕಳೆದ 3 ವರ್ಷಗಳಲ್ಲಿ 2 ಬಾರಿ ರನ್ನರ್ಸ್-ಅಪ್ ಆಗಿತ್ತು.