ಆಸ್ಟ್ರೇಲಿಯನ್ ಓಪನ್ಗೆ ಸೆರೆನಾ ವಿಲಿಯಮ್ಸ್
ಸಿಡ್ನಿ,ಡಿ.8: ಐದು ತಿಂಗಳ ಹಿಂದೆ ಹೆಣ್ಣುಮಗುವಿನ ತಾಯಿಯಾಗಿರುವ ಅಮೆರಿಕದ ಹಿರಿಯ ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಆಸ್ಟ್ರೇಲಿಯನ್ ಓಪನ್ನಲ್ಲಿ ಭಾಗವಹಿಸಬೇಕೆಂಬ ನಮ್ಮ ಮನವಿಯನ್ನು ಸ್ವೀಕರಿಸಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ. ಟೂರ್ನಿಯಲ್ಲಿ ಅಗ್ರ-100 ಮಹಿಳಾ ಆಟಗಾರ್ತಿಯರಲ್ಲಿ 98 ಮಂದಿ ಭಾಗವಹಿಸಲಿದ್ದು, ಈ ಪೈಕಿ ಹಾಲಿ ಚಾಂಪಿಯನ್ ಸೆರೆನಾ ಕೂಡ ಒಬ್ಬರಾಗಿದ್ದಾರೆ. ಅವರು ವರ್ಷದ ಮೊದಲ ಟೂರ್ನಿಯಲ್ಲಿ ಭಾಗವಹಿಸುವುದಾಗಿ ಖಚಿತ ಪಡಿಸಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.
ವಿಶ್ವದ ನಂ.1 ಆಟಗಾರ್ತಿ ಸಿಮೊನಾ ಹಾಲೆಪ್ ಹಾಗೂ 16 ಬಾರಿ ಗ್ರಾನ್ಸ್ಲಾಮ್ ಪ್ರಶಸ್ತಿ ಜಯಿಸಿರುವ ರಫೆಲ್ ನಡಾಲ್ ಮೆಲ್ಬೋರ್ನ್ ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ. ಆದರೆ ಎಲ್ಲರ ಕಣ್ಣು ಸೆರೆನಾ ಮೇಲಿದೆ. ಅವರು ಈ ವರ್ಷ ಟೂರ್ನಿಯನ್ನು ಜಯಿಸಿದ್ದರು. ವಿಲಿಯಮ್ಸ್ ಸೆಪ್ಟಂಬರ್ನಲ್ಲಿ ಅಲೆಕ್ಸಿಸ್ ಒಲಿಂಪಿಯಾ ಹೆಸರಿನ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಕಳೆದ ತಿಂಗಳಷ್ಟೇ ಗೆಳಯ ರೆಡ್ಡಿಟ್ ಸಹ-ಸಂಸ್ಥಾಪಕ ಅಲೆಕ್ಸಿಸ್ ಒಹಾನಿಯನ್ರನ್ನು ವಿವಾಹವಾಗಿದ್ದರು. ಗಾಯದ ಸಮಸ್ಯೆ ಎದುರಿಸುತ್ತಿರುವ ನೊವಾಕ್ ಜೊಕೊವಿಕ್, ಆ್ಯಂಡಿ ಮರ್ರೆ, ಕೀ ನಿಶಿಕೊರಿ ಹಾಗೂ ಸ್ಟಾನ್ ವಾವ್ರಿಂಕ ಈ ಟೂರ್ನಮೆಂಟ್ನ ಮೂಲಕ ವಾಪಸಾಗಲಿದ್ದಾರೆ. ಈ ವರ್ಷದ ಟೂರ್ನಿಯಲ್ಲಿ ವಿಶ್ವದ ನಂ.12ನೇ ಆಟಗಾರ್ತಿ ರಶ್ಯದ ಸ್ವೆತ್ಲಾನಾ ಕುಝ್ನೆಸೋವಾ ಹಾಗೂ ಚೀನಾ ಝೆಂಗ್ ಸೈ ಅವರು ಭಾಗವಹಿಸುವುದಿಲ್ಲ. ಟೂರ್ನಿಯು 2018ರ ಜ.15 ರಿಂದ 28ರ ತನಕ ನಡೆಯಲಿದೆ.