ಹಾಕಿ ರ್ಯಾಂಕಿಂಗ್: ಭಾರತಕ್ಕೆ ಆರನೇ ಸ್ಥಾನ
ಲಾಸನ್ನೆ, ಡಿ.12: ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್(ಎಫ್ಐಎಚ್)ಮಂಗಳವಾರ ಬಿಡುಗಡೆ ಮಾಡಿರುವ ರ್ಯಾಂಕಿಂಗ್ನಲ್ಲಿ ಭಾರತದ ಪುರುಷರ ಹಾಗೂ ಮಹಿಳಾ ತಂಡ ಕ್ರಮವಾಗಿ 6ನೇ ಹಾಗೂ 10ನೇ ಸ್ಥಾನವನ್ನು ಉಳಿಸಿಕೊಂಡಿವೆ. ಪುರುಷರ ತಂಡ ವರ್ಷಾಂತ್ಯದಲ್ಲಿ 6ನೇ ಸ್ಥಾನದಲ್ಲಿತ್ತು. ಈ ಸ್ಥಾನವನ್ನು ವರ್ಷದುದ್ದಕ್ಕೂ ಉಳಿಸಿಕೊಳ್ಳಲು ಸಫಲವಾಗಿದೆ. ರವಿವಾರ ವಿಶ್ವ ಹಾಕಿ ಲೀಗ್ನಲ್ಲಿ ಕಂಚು ಜಯಿಸಿದ್ದರೂ ಭಾರತಕ್ಕೆ(1566 ಅಂಕ)ಐದನೇ ಸ್ಥಾನದಲ್ಲಿರುವ ಜರ್ಮನಿ(1680) ತಂಡವನ್ನು ಹಿಂದಿಕ್ಕಲು ಸಾಧ್ಯವಾಗಿಲ್ಲ. ಮಹಿಳಾ ತಂಡ ವರ್ಷದ ಆರಂಭದಲ್ಲಿ 12ನೇ ಸ್ಥಾನದಲ್ಲಿತ್ತು. ನಿಧಾನವಾಗಿ 2 ಸ್ಥಾನ ಭಡ್ತಿ ಪಡೆದಿದೆ. ಕಳೆದ ತಿಂಗಳು ಏಷ್ಯಾಕಪ್ ಜಯಿಸಿರುವ ಹಿನ್ನೆಲೆಯಲ್ಲಿ 2 ಅಂಕ ಗಳಿಸಿದೆ.
ಪುರುಷರ ವಿಭಾಗದಲ್ಲಿ ಆಸ್ಟ್ರೇಲಿಯ 2016ರ ಬಳಿಕ ಮೊದಲ ಬಾರಿ ಅಗ್ರ ಸ್ಥಾನಕ್ಕೇರಿದೆ. ಬೆಲ್ಜಿಯಂ, ಹಾಲೆಂಡ್ ಹಾಗೂ ಜರ್ಮನಿ 3ನೇ, 4ನೇ ಹಾಗೂ 5ನೇ ಸ್ಥಾನದಲ್ಲಿವೆ.
Next Story