ಮಾರ್ಟೆನ್ಸ್, ವೋಝ್ನಿಯಾಕಿ ಸೆಮಿ ಫೈನಲ್ಗೆ ಪ್ರವೇಶ
ಮೆಲ್ಬೋರ್ನ್, ಜ.23: ವಿಶ್ವದ ನಂ.4 ನೇ ಆಟಗಾರ್ತಿ ಎಲಿನಾ ಸ್ವಿಟೋಲಿನಾರನ್ನು ನೇರ ಸೆಟ್ಗಳಿಂದ ಮಣಿಸಿರುವ ಶ್ರೇಯಾಂಕರಹಿತ ಆಟಗಾರ್ತಿ ಎಲಿಸ್ ಮಾರ್ಟೆನ್ಸ್ ಆಸ್ಟ್ರೇಲಿಯನ್ ಓಪನ್ನಲ್ಲಿ ಸೆಮಿಫೈನಲ್ಗೆ ತಲುಪಿದ್ದಾರೆ.
ಮಂಗಳವಾರ ಒಂದು ಗಂಟೆ, 13 ನಿಮಿಷಗಳ ಕಾಲ ನಡೆದ ಕ್ವಾರ್ಟರ್ ಫೈನಲ್ನಲ್ಲಿ ಬೆಲ್ಜಿಯಂನ ವಿಶ್ವದ ನಂ.37ನೇ ಆಟಗಾರ್ತಿ ಎಲಿಸ್ ಮಾರ್ಟೆನ್ಸ್ ಉಕ್ರೇನ್ನ ಸ್ವಿಟೋಲಿನಾರನ್ನು 6-4, 6-0 ಅಂತರದಿಂದ ಮಣಿಸಿದರು.
ಮಾರ್ಟೆನ್ಸ್ ಇದೇ ಮೊದಲ ಬಾರಿ ಗ್ರಾನ್ಸ್ಲಾಮ್ ಟೂರ್ನಿಯಲ್ಲಿ ಅಂತಿಮ-4ರ ಹಂತ ತಲುಪಿದ ಸಾಧನೆ ಮಾಡಿದ್ದಾರೆ. 2012ರ ಬಳಿಕ ಸೆಮಿಫೈನಲ್ಗೆ ತಲುಪಿದ ಬೆಲ್ಜಿಯಂನ ಮೊದಲನೇ ಆಟಗಾರ್ತಿ ಎನಿಸಿಕೊಂಡಿದ್ದಾರೆ. 2012ರಲ್ಲಿ ಕಿಮ್ ಕ್ಲಿಜ್ಸ್ಟರ್ಸ್ ಸೆಮಿ ಫೈನಲ್ಗೆ ತಲುಪಿದ್ದರು.
►ವೋಝ್ನಿಯಾಕಿ ಸೆಮಿಗೆ: ಮಾಜಿ ವಿಶ್ವ ನಂ.1 ಆಟಗಾರ್ತಿ ಕರೊಲಿನ್ ವೋಝ್ನಿಯಾಕಿ ಸ್ಪೇನ್ನ ಕಾರ್ಲಾ ಸುಯರೆಝ್ ನವಾರೊರನ್ನು 6-0, 6-7(3), 6-2 ಸೆಟ್ಗಳಿಂದ ಮಣಿಸುವ ಮೂಲಕ ಆಸ್ಟ್ರೇಲಿಯನ್ ಓಪನ್ ಮಹಿಳೆಯರ ಸಿಂಗಲ್ಸ್ನಲ್ಲಿ ಸೆಮಿ ಫೈನಲ್ಗೆ ತಲುಪಿದ್ದಾರೆ.
ದ್ವಿತೀಯ ಶ್ರೇಯಾಂಕದ ವೋಝ್ನಿಯಾಕಿ ಆಸ್ಟ್ರೇಲಿಯನ್ ಓಪನ್ನಲ್ಲಿ ಎರಡನೇ ಬಾರಿ ಅಂತಿಮ-4ರ ಸುತ್ತು ಪ್ರವೇಶಿಸಿದ್ದು ಮುಂದಿನ ಸುತ್ತಿನಲ್ಲಿ ಬೆಲ್ಜಿಯಂನ ಎಲಿಸ್ ಮಾರ್ಟೆನ್ಸ್ರನ್ನು ಎದುರಿಸಲಿದ್ದಾರೆ.