ಬೋಪಣ್ಣ-ಬಾಬೊಸ್ ಫೈನಲ್ಗೆ
ಮೆಲ್ಬೋರ್ನ್, ಜ.26: ಭಾರತದ ರೋಹನ್ ಬೋಪಣ್ಣ ಹಾಗೂ ಹಂಗೇರಿಯದ ಟಿಮಿಯಾ ಬಾಬೊಸ್ ಆಸ್ಟ್ರೇಲಿಯನ್ ಓಪನ್ನ ಮಿಶ್ರ ಡಬಲ್ಸ್ನಲ್ಲಿಫೈನಲ್ಗೆ ತಲುಪಿದ್ದಾರೆ. ಕನ್ನಡಿಗ ಬೋಪಣ್ಣ ಎರಡನೇ ಗ್ರಾನ್ಸ್ಲಾಮ್ ಪ್ರಶಸ್ತಿ ಜಯಿಸುವತ್ತ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.
ಇಲ್ಲಿ ಶುಕ್ರವಾರ ನಡೆದ ಸೆಮಿ ಫೈನಲ್ನಲ್ಲಿ ಬೋಪಣ್ಣ-ಬಾಬೊಸ್ ಜೋಡಿ ಬ್ರೆಝಿಲ್ನ ಮಾರ್ಸೆಲೊ ಡೆಮೊಲೈನರ್ ಹಾಗೂ ಸ್ಪೇನ್ನ ಮರಿಯಾ ಜೋಸ್ ಸ್ಯಾಂಚೆಝ್ ವಿರುದ್ಧ 7-5, 5-7, 10-6 ಸೆಟ್ಗಳ ಅಂತರದಿಂದ ಜಯ ಸಾಧಿಸಿದರು.
ಬೋಪಣ್ಣ 2017ರಲ್ಲಿ ಕೆನಡಾದ ಗ್ಯಾಬ್ರಿಲಾ ಡಾಬ್ರೊವ್ಸ್ಕಿ ಜೊತೆಗೂಡಿ ಫ್ರೆಂಚ್ ಓಪನ್ನಲ್ಲಿ ಚೊಚ್ಚಲ ಗ್ರಾನ್ಸ್ಲಾಮ್ ಪ್ರಶಸ್ತಿ ಗೆದ್ದುಕೊಂಡಿದ್ದರು.
ಕುತೂಹಲಕಾರಿ ವಿಷಯವೆಂದರೆ ಬೋಪಣ್ಣ ಫೈನಲ್ನಲ್ಲಿ ಡಾಬ್ರೊವ್ಸ್ಕಿ ಅವರನ್ನೇ ಎದುರಿಸಲಿದ್ದಾರೆ. ಕ್ರೊಯೇಷಿಯದ ಮ್ಯಾಟ್ ಪಾವಿಕ್ರೊಂದಿಗೆ ಮತ್ತೊಂದು ಮಿಶ್ರ ಡಬಲ್ಸ್ ಸೆಮಿಫೈನಲ್ ಆಡಿದ ಡಾಬ್ರೊವ್ಸ್ಕಿ ಬ್ರುನೊ ಸೊರೆಸ್ ಹಾಗೂ ಎಕಟೆರಿನಾ ಮಕರೋವಾರನ್ನು 6-1, 6-4 ಸೆಟ್ಗಳಿಂದ ಸೋಲಿಸಿದರು.
ಮಹೇಶ್ ಭೂಪತಿ, ಲಿಯಾಂಡರ್ ಪೇಸ್ ಹಾಗೂ ಸಾನಿಯಾ ಮಿರ್ಝಾ ಬಳಿಕ ಪ್ರಮುಖ ಪ್ರಶಸ್ತಿ ಎತ್ತಲು ಸಜ್ಜಾಗಿರುವ ಭಾರತದ 4ನೇ ಆಟಗಾರ ಬೋಪಣ್ಣ. ಈಗಾಗಲೇ ಫ್ರೆಂಚ್ ಓಪನ್ ಪ್ರಶಸ್ತಿ ಜಯಿಸಿರುವ ಬೋಪಣ್ಣ ಮೆಲ್ಬೋರ್ನ್ ಪಾಕ್ನಲ್ಲಿ ಮಿಶ್ರ ಡಬಲ್ಸ್ ಪ್ರಶಸ್ತಿ ಜಯಿಸಿದರೆ ಈವರ್ಷ ಅರ್ಜುನ ಪ್ರಶಸ್ತಿಗೆ ಪ್ರಬಲ ಸ್ಪರ್ಧಿಯಾಗಲಿದ್ದಾರೆ.