ಇಂಡೋನೇಷ್ಯಾ ಮಾಸ್ಟರ್ಸ್ ಫೈನಲ್ನಲ್ಲಿ ಮುಗ್ಗರಿಸಿದ ಸೈನಾ
ಜಕಾರ್ತಾ, ಜ.28: ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರು ಇಲ್ಲಿ ನಡೆದ ಇಂಡೋನೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ನ ಫೈನಲ್ನಲ್ಲಿ ಪ್ರಶಸ್ತಿ ಎತ್ತುವಲ್ಲಿ ಎಡವಿದ್ದಾರೆ.
ರವಿವಾರ ನಡೆದ ಫೈನಲ್ನಲ್ಲಿ ಸೈನಾ ಅವರು ವಿಶ್ವದ ನಂ.1 ಆಟಗಾರ್ತಿ ತೈವಾನ್ನ ತೈ ಝು ಯಿಂಗ್ ವಿರುದ್ಧ 9-21, 13-21 ಅಂತರದಲ್ಲಿ ಸೋತು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
ಕೇವಲ 27 ನಿಮಿಷಗಳಲ್ಲಿ ಸೈನಾ ಮತ್ತು ತೈ ಝು ಯಿಂಗ್ ಅವರ ನಡುವಿನ ಪ್ರಶಸ್ತಿಯ ಸುತ್ತಿನ ಹಣಾಹಣಿ ಕೊನೆಗೊಂಡಿತು.
ಈ ತನಕ 10 ಬಾರಿ ಇವರು ಮುಖಾಮುಖಿಯಾಗಿದ್ದರು. ಇದೀಗ ಸೈನಾ ವಿರುದ್ಧ ತೈ ಝು 9ನೇ ಬಾರಿ ಗೆಲುವು ದಾಖಲಿಸಿ ಪ್ರಶಸ್ತಿ ಎತ್ತಿದ್ದಾರೆ.
2013ರಲ್ಲಿ ಸೈನಾ ಅವರು ತೈ ಝು ಅವರನ್ನು ಸ್ವಿಸ್ ಓಪನ್ನಲ್ಲಿ ಒಂದು ಬಾರಿ ಮಣಿಸಿದ್ದರು. ಬಳಿಕ ಈ ತನಕ ಸೈನಾ ಅವರಿಗೆ ಇನ್ನೊಂದು ಬಾರಿ ತೈ ಝು ಯಿಂಗ್ ಅವರಿಗೆ ಸೋಲುಣಿಸಲು ಸಾಧ್ಯವಾಗಲಿಲ್ಲ.
Next Story