ನ್ಯೂಝಿಲೆಂಡ್ ಮೇಲುಗೈ: ವಿಲಿಯಮ್ಸನ್ 18ನೇ ಶತಕ
ಆಕ್ಲೆಂಡ್, ಮಾ.23: ನಾಯಕ ಕೇನ್ ವಿಲಿಯಮ್ಸನ್ ಅವರ ದಾಖಲೆಯ 18ನೇ ಶತಕದ ನೆರವಿನಿಂದ ನ್ಯೂಝಿಲೆಂಡ್ ತಂಡ ಮಳೆ ಬಾಧಿತ ಮೊದಲ ಟೆಸ್ಟ್ ನ ಎರಡನೇ ದಿನದಾಟದಲ್ಲಿ ಇಂಗ್ಲೆಂಡ್ ವಿರುದ್ಧ ಉತ್ತಮ ಮುನ್ನಡೆ ಕಾಯ್ದುಕೊಂಡಿದೆ.
ಕಿವೀಸ್ ನಾಡಿನಲ್ಲಿ ಮೊದಲ ಬಾರಿ ನಡೆಯುತ್ತಿರುವ ಹಗಲು-ರಾತ್ರಿ ಟೆಸ್ಟ್ ಪಂದ್ಯಕ್ಕೆ ಪದೇ ಪದೇ ಮಳೆ ಅಡ್ಡಿಯಾಯಿತು. ಹೀಗಾಗಿ ಕೇವಲ 23.1 ಓವರ್ ಪಂದ್ಯ ಆಡಲು ಸಾಧ್ಯವಾಗಿದ್ದು, ಕಿವೀಸ್ ನಿನ್ನೆಯ ಮೊತ್ತ 171 ರನ್ಗೆ ಕೇವಲ 54 ರನ್ ಸೇರಿಸಿತು. ನ್ಯೂಝಿಲೆಂಡ್ ಮಳೆಯಿಂದಾಗಿ ಪಂದ್ಯ ಬೇಗನೆ ಕೊನೆಗೊಂಡಾಗ 92.1 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 229 ರನ್ ಗಳಿಸಿತು. ಒಟ್ಟು 171 ರನ್ ಮುನ್ನಡೆ ಸಾಧಿಸಿತು. ಇಂಗ್ಲೆಂಡ್ ತಂಡ ಮೊದಲ ಇನಿಂಗ್ಸ್ನಲ್ಲಿ ಕೇವಲ 58 ರನ್ಗೆ ಆಲೌಟಾಗಿತ್ತು.
ಜೇಮ್ಸ್ ಆ್ಯಂಡರ್ಸನ್ ಎಸೆತದಲ್ಲಿ ಒಂಟಿ ರನ್ ಗಳಿಸುವ ಮೂಲಕ ವಿಲಿಯಮ್ಸನ್ ಕಿವೀಸ್ ಪರ ಗರಿಷ್ಠ ಟೆಸ್ಟ್ ಶತಕ ದಾಖಲಿಸಿದ ಸಾಧನೆ ಮಾಡಿದರು. ತಮ್ಮದೇ ದೇಶದ ರಾಸ್ ಟೇಲರ್ ಹಾಗೂ ದಿವಂಗತ ಮಾರ್ಟಿನ್ ಕ್ರೋವ್(ತಲಾ 17) ಶತಕದ ದಾಖಲೆಯನ್ನು ಮುರಿದರು. ವಿಲಿಯಮ್ಸನ್ 196 ಎಸೆತಗಳಲ್ಲಿ 11 ಬೌಂಡರಿ, 1 ಸಿಕ್ಸರ್ಗಳ ಸಹಾಯದಿಂದ ಶತಕ ಪೂರೈಸಿದ ಬೆನ್ನಿಗೇ ಮೊದಲ ಬಾರಿ ಪಂದ್ಯಕ್ಕೆ ಮಳೆ ಅಡ್ಡಿಯಾಯಿತು. ಒಂದು ಗಂಟೆ ಬಳಿಕ ಪಂದ್ಯ ಮತ್ತೆ ಆರಂಭವಾಯಿತು. ವಿಲಿಯಮ್ಸನ್ 220 ಎಸೆತಗಳಲ್ಲಿ 102 ರನ್ ಗಳಿಸಿ ಆ್ಯಂಡರ್ಸನ್ಗೆ ವಿಕೆಟ್ ಒಪ್ಪಿಸಿದರು. ವಿಲಿಯಮ್ಸನ್ ಔಟಾಗುವ ಮೊದಲು ಟಾಮ್ ಲಥಾಮ್ (26)ರೊಂದಿಗೆ 84 ರನ್, ರಾಸ್ ಟೇಲರ್ರೊಂದಿಗೆ 31 ಹಾಗೂ ನಿಕೊಲ್ಸ್ ರೊಂದಿಗೆ 83 ರನ್ ಜೊತೆಯಾಟ ನಡೆಸಿದ್ದಾರೆ. ವಿಲಿಯಮ್ಸನ್ರೊಂದಿಗೆ 2ನೇ ದಿನದಾಟ ಆರಂಭಿಸಿದ್ದ ನಿಕೊಲ್ಸ್ 143 ಎಸೆತಗಳಲ್ಲಿ ಔಟಾಗದೆ 49 ರನ್ ಗಳಿಸಿ ಬಿಜೆ ವಾಟ್ಲಿಂಗ್ (17)ಅವರೊಂದಿಗೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಎರಡನೇ ಅವಧಿಯಲ್ಲಿ ಮತ್ತೊಮ್ಮೆ ಮಳೆ ಸುರಿಯಲಾರಂಭಿಸಿದ ಕಾರಣ ನಾಲ್ಕು ಗಂಟೆ ಕಾದ ಬಳಿಕ ದಿನದಾಟವನ್ನು ಸ್ಥಗಿತಗೊಳಿಸಲಾಯಿತು. 53 ರನ್ಗೆ 3 ವಿಕೆಟ್ ಕಬಳಿಸಿದ ಆ್ಯಂಡರ್ಸನ್ ಇಂಗ್ಲೆಂಡ್ನ ಯಶಸ್ವಿ ಬೌಲರ್ ಎನಿಸಿಕೊಂಡರು.
ಸಂಕ್ಷಿಪ್ತ ಸ್ಕೋರ್
►ಇಂಗ್ಲೆಂಡ್ ಮೊದಲ ಇನಿಂಗ್ಸ್: 58 ರನ್ಗೆ ಆಲೌಟ್
►ನ್ಯೂಝಿಲೆಂಡ್ ಮೊದಲ ಇನಿಂಗ್ಸ್: 229/4 (ವಿಲಿಯಮ್ಸನ್ 102, ನಿಕೊಲ್ಸ್ ಔಟಾಗದೆ 49, ಲಥಾಮ್ 26, ವಾಟ್ಲಿಂಗ್ ಔಟಾಗದೆ 17, ಆ್ಯಂಡರ್ಸನ್ 3-53)