ಈ ಕೌಂಟಿ ತಂಡಕ್ಕೆ ಆಡಲಿದ್ದಾರೆ ವಿರಾಟ್ ಕೊಹ್ಲಿ
ಹೊಸದಿಲ್ಲಿ, ಮಾ.24: ಮುಂಬರುವ ಇಂಗ್ಲೆಂಡ್ ಕ್ರಿಕೆಟ್ ಪ್ರವಾಸಕ್ಕೆ ತಯಾರಿ ನಡೆಸುವ ಉದ್ದೇಶದಿಂದ ಭಾರತ ನಾಯಕ ವಿರಾಟ್ ಕೊಹ್ಲಿ ಇದೇ ಮೊದಲ ಬಾರಿ ಕೌಂಟಿ ಕ್ರಿಕೆಟ್ನಲ್ಲಿ ಆಡಲಿದ್ದಾರೆ. ಕೊಹ್ಲಿ ಸರ್ರೆ ತಂಡವನ್ನು ಪ್ರತಿನಿಧಿಸಲಿದ್ದಾರೆ ಎಂದು ಶನಿವಾರ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.
ಕೌಂಟಿ ಕ್ರಿಕೆಟ್ನಲ್ಲಿ ಕಾಣಿಸಿಕೊಳ್ಳಲಿರುವ ಕೊಹ್ಲಿ ಅಫ್ಘಾನಿಸ್ತಾನ ತಂಡ ವಿರುದ್ಧ ಟೆಸ್ಟ್ ಪಂದ್ಯದಿಂದ ದೂರ ಉಳಿಯಲಿದ್ದಾರೆ. ಅಫ್ಘಾನ್ ಕ್ರಿಕೆಟ್ ತಂಡ ಜೂ.14 ರಂದು ಬೆಂಗಳೂರಿನಲ್ಲಿ ಭಾರತ ವಿರುದ್ಧ ಆಡುವ ಮೂಲಕ ಟೆಸ್ಟ್ ಕ್ರಿಕೆಟ್ಗೆ ಕಾಲಿಡಲಿದೆ.
29ರ ಹರೆಯದ ಕೊಹ್ಲಿ ಐಪಿಎಲ್ ಕೊನೆಗೊಂಡ ತಕ್ಷಣ ಇಂಗ್ಲೆಂಡ್ಗೆ ಪ್ರಯಾಣ ಬೆಳೆಸಲಿದ್ದಾರೆ. ಕೊಹ್ಲಿ 19 ಬಾರಿಯ ಕೌಂಟಿ ಚಾಂಪಿಯನ್ ಸರ್ರೆ ತಂಡವನ್ನು ಪ್ರತಿನಿಧಿಸಲಿರುವ ಭಾರತದ ಮೊದಲ ಆಟಗಾರ ಎನಿಸಿಕೊಳ್ಳಲಿದ್ದಾರೆ.
ಕೊಹ್ಲಿ ಇಂಗ್ಲೆಂಡ್ನಲ್ಲಿ ಕಳೆದ ಬಾರಿ ಆಡಿರುವ 5 ಟೆಸ್ಟ್ ಪಂದ್ಯಗಳಲ್ಲಿ 13.40ರ ಸರಾಸರಿಯಲ್ಲಿ ಕೇವಲ 134 ರನ್ ಗಳಿಸಿದ್ದರು. ಭಾರತದ ಟೆಸ್ಟ್ ಕ್ರಿಕೆಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ ಯಾರ್ಕ್ ಶೈರ್ ತಂಡದಲ್ಲೇ ಮುಂದುವರಿಯುವ ಸಾಧ್ಯತೆಯಿದೆ. ಸಹ ಆಟಗಾರ ಕೊಹ್ಲಿ ಪ್ರತಿನಿಧಿಸುವ ಸರ್ರೆ ತಂಡವನ್ನು ಜೂನ್ನಲ್ಲಿ ಎದುರಿಸುವ ನಿರೀಕ್ಷೆಯಿದೆ.
ಭಾರತ ತಂಡ ಇಂಗ್ಲೆಂಡ್ ಕ್ರಿಕೆಟ್ ಪ್ರವಾಸದ ವೇಳೆ 5 ಟೆಸ್ಟ್, 3 ಏಕದಿನ ಹಾಗೂ 3 ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಲಿದೆ. ಭಾರತ-ಇಂಗ್ಲೆಂಡ್ ನಡುವೆ ಮೊದಲ ಟೆಸ್ಟ್ ಪಂದ್ಯ ಆ.1 ರಂದು ಎಡ್ಜ್ಬಾಸ್ಟನ್ನಲ್ಲಿ ಆರಂಭವಾಗಲಿದೆ.