ಆದಿಲ್ಗೆ ಅವಳಿ ಚಿನ್ನ
ಜೂನಿಯರ್ ಟೇಬಲ್ ಟೆನಿಸ್ ಓಪನ್
ಮುಂಬೈ, ಮಾ.24: ಟ್ಯುನೀಶಿಯದಲ್ಲಿ ಶುಕ್ರವಾರ ನಡೆದ ಟ್ಯುನೀಶಿಯ ಜೂನಿಯರ್ ಹಾಗೂ ಕೆಡೆಟ್ ಓಪನ್ ಟೇಬಲ್ ಟೆನಿಸ್ನಲ್ಲಿ ಭಾರತದ ಭರವಸೆಯ ಆಟಗಾರ ಆದಿಲ್ ಆನಂದ್ ಅವಳಿ ಚಿನ್ನದ ಪದಕ ಜಯಿಸಿ ಅಪೂರ್ವ ಪ್ರದರ್ಶನ ನೀಡಿದ್ದಾರೆ. ಯುವ ಆಟಗಾರ ಆನಂದ್ ಐಟಿಟಿಎಫ್ ಜೂನಿಯರ್ ವರ್ಲ್ಡ್ ಜೂನಿಯರ್ ಸರ್ಕ್ಯೂಟ್ ಟೂರ್ನಿಯಲ್ಲಿ ಒಟ್ಟು 2 ಚಿನ್ನ, 2 ಬೆಳ್ಳಿ ಹಾಗೂ 2 ಕಂಚು ಗೆದ್ದುಕೊಂಡಿದ್ದಾರೆ.
ಮುಂದಿನ ತಿಂಗಳು 13ನೇ ವಯಸ್ಸಿಗೆ ಕಾಲಿಡಲಿರುವ ಆನಂದ್ ಮಿನಿ-ಕೆಡೆಟ್ ಸಿಂಗಲ್ಸ್ನಲ್ಲಿ ಅಲ್ಜೀರಿಯಾದ ಅಬ್ದುಲ್ವಹಾಬ್ರನ್ನು 3-1 ಅಂತರದಿಂದ ಸೋಲಿಸಿ ಚಿನ್ನ ಜಯಿಸಿದರು. ಕೆಡೆಟ್ ಬಾಲಕರ ಡಬಲ್ಸ್ನಲ್ಲಿ ಪಯಾಸ್ ಜೈನ್ ಜೊತೆಗೂಡಿದ ಆನಂದ್ ಟ್ಯುನೀಶಿಯದ ಅಝಿಝ್ ಜೆರ್ಬಿ ಹಾಗೂ ಅಮೈನ್ ಮುಹಮ್ಮದ್ರನ್ನು 11-9, 11-7, 11-8 ನೇರ ಗೇಮ್ಗಳಿಂದ ಸೋಲಿಸಿ ಚಿನ್ನ ಜಯಿಸಿದರು. ಪಾಯಸ್, ಕೆಡೆಟ್ ಬಾಯ್ಸ್ ಸಿಂಗಲ್ಸ್ ನಲ್ಲಿ ಚೀನಾದ ಲಿಯು ಮೆಂಗ್ಲಾಂಗ್ ವಿರುದ್ಧ 1-3 ರಿಂದ ಸೋತು ಬೆಳ್ಳಿಗೆ ತೃಪ್ತಿಪಟ್ಟರು. ವೌನೇಶ್ ಶಾ ಜೂನಿಯರ್ ಬಾಯ್ಸಿ ಸಿಂಗಲ್ಸ್ ಫೈನಲ್ನಲ್ಲಿ ವೀರೋಚಿತ ಪ್ರದರ್ಶನ ನೀಡಿದರೂ ಇರಾನ್ನ ಅಮಿನ್ ಅಹ್ಮದಿಯನ್ ವಿರುದ್ಧ 2-4 ರಿಂದ ಸೋತರು. ಬೆಳ್ಳಿ ಪದಕ ಪಡೆದರು.