ವಿವಾದಗಳಿಗೂ ಆಸ್ಟ್ರೇಲಿಯ ಆಟಗಾರರಿಗೂ ಬಿಡಿಸಲಾರದ ನಂಟು!
ಮೆಲ್ಬೋರ್ನ್, ಮಾ.26: ದಕ್ಷಿಣ ಆಫ್ರಿಕ ವಿರುದ್ಧ ಮೂರನೇ ಟೆಸ್ಟ್ ಪಂದ್ಯದಲ್ಲಿ ಕ್ರಿಕೆಟ್ ಚೆಂಡು ವಿರೂಪಗೊಳಿಸಿದ ಆಸ್ಟ್ರೇಲಿಯ ಎಲ್ಲೆಡೆ ಟೀಕೆಗೆ ಗುರಿಯಾಗಿದೆ. ನಾಯಕ ಸ್ಮಿತ್ ಐಸಿಸಿಯಿಂದ ಒಂದು ಪಂದ್ಯದಿಂದ ನಿಷೇಧಕ್ಕೂ ಒಳಗಾಗಿದ್ದಾರೆ. ಆಸ್ಟ್ರೇಲಿಯ ವಿವಾದಕ್ಕೆ ಸಿಲುಕುತ್ತಿರುವುದು ಇದೇ ಮೊದಲಲ್ಲ. ಆಸ್ಟ್ರೇಲಿಯಕ್ಕೂ ಹಾಗೂ ವಿವಾದಕ್ಕೂ ಬಿಡಿಸಲಾರದ ನಂಟಿದೆ. ಕಳೆದ 40 ವರ್ಷಗಳ ಅವಧಿಯಲ್ಲಿ ಆಸ್ಟ್ರೇಲಿಯ ವಿವಾದಗಳಿಗೆ ಸಿಲುಕಿದ ಪ್ರಮುಖ ಘಟನೆಗಳು ಇಂತಿವೆ.
2017ರ ಬೆಂಗಳೂರು ಟೆಸ್ಟ್: ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಸ್ಟೀವ್ ಸ್ಮಿತ್ ಎಲ್ಬಿಡಬ್ಲು ಬಲೆಗೆ ಬಿದ್ದರು. ಅಂಪೈರ್ ನಿರ್ಧಾರವನ್ನು ಪ್ರಶ್ನಿಸಿ ಡಿಆರ್ಎಸ್ ಮೊರೆ ಹೋಗುವ ಮೊದಲು ಸ್ಮಿತ್ ಡ್ರೆಸ್ಸಿಂಗ್ರೂಮ್ನತ್ತ ನೋಡಿ ಮಾರ್ಗದರ್ಶನ ಪಡೆಯಲು ಯತ್ನಿಸಿದರು. ಸ್ಮಿತ್ ಅವರ ಈ ಪ್ರಯತ್ನವನ್ನು ಭಾರತದ ನಾಯಕ ವಿರಾಟ್ ಕೊಹ್ಲಿ ತೀವ್ರವಾಗಿ ವಿರೋಧಿಸಿದರು. ಸ್ಮಿತ್ ಹಾಗೂ ಇತರ ಆಸ್ಟ್ರೇಲಿಯ ಆಟಗಾರರು ಈ ಹಿಂದೆ ಇದೇ ರೀತಿ ತಂತ್ರ ಅನುಸರಿಸಿದ್ದಾರೆ ಎಂದು ಕೊಹ್ಲಿ ಆರೋಪಿಸಿದ್ದು ವಿವಾದ ಸೃಷ್ಟಿಸಿತ್ತು.
2008ರ ಸಿಡ್ನಿ ಟೆಸ್ಟ್: ಎಸ್ಸಿಜಿ ಸ್ಟೇಡಿಯಂನಲ್ಲಿ ಭಾರತ ಹಾಗೂ ಆಸ್ಟ್ರೇಲಿಯ ನಡುವಿನ ಪಂದ್ಯ ಹರ್ಭಜನ್ ಸಿಂಗ್ ಹಾಗೂ ಆ್ಯಂಡ್ರೂ ಸೈಮಂಡ್ಸ್ ಒಳಗೊಂಡಿದ್ದ ವಿವಾದ ‘ಮಂಕಿಗೇಟ್’ ನಿಂದಲೇ ಹೆಚ್ಚು ಸುದ್ದಿಯಾಗಿತ್ತು. ಇದೇ ಪಂದ್ಯದಲ್ಲಿ ಮೈಕಲ್ ಕ್ಲಾರ್ಕ್ ಅವರು ಸೌರವ್ ಗಂಗುಲಿ ನೀಡಿದ ಕ್ಯಾಚ್ ಪಡೆಯುವಾಗ ಚೆಂಡು ಸ್ಪಷ್ಟವಾಗಿ ನೆಲಕ್ಕೆ ತಾಗಿತ್ತು. ಆದಾಗ್ಯೂ ನಾಯಕ ರಿಕಿ ಪಾಂಟಿಂಗ್ ಅವರು ಕ್ಲಾರ್ಕ್ ಸರಿಯಾಗಿ ಕ್ಯಾಚ್ ಪಡೆದಿದ್ದಾರೆಂದು ವಾದಿಸಿದ್ದರು. ಈ ಪಂದ್ಯವನ್ನು ಭಾರತ ಸೋತಿತ್ತು. ಕೇವಲ ಒಂದು ತಂಡ ಮಾತ್ರ ಕ್ರೀಡಾ ಸ್ಫೂರ್ತಿಯಿಂದ ಆಡಿದೆ ಎಂದು ಭಾರತದ ನಾಯಕ ಅನಿಲ್ ಕುಂಬ್ಳೆ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದರು.
2003ರ ವಿಶ್ವಕಪ್ನಲ್ಲಿ ವಾರ್ನ್ಗೆ ನಿಷೇಧ
ಆಸ್ಟ್ರೇಲಿಯದ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ವೃತ್ತಿಜೀವನದಲ್ಲಿ ವಿವಾದಗಳೇ ಸುತ್ತುವರಿದಿದ್ದವು. 2003ರ ವಿಶ್ವಕಪ್ಗೆ ಮೊದಲು ನಿಷೇಧಿತ ಮಾತ್ರೆ ಸೇವನೆ ಆರೋಪದಲ್ಲಿ ಸಿಕ್ಕಿ ಬಿದ್ದಿರುವುದು ದೊಡ್ಡ ವಿವಾದವಾಗಿತ್ತು. ನಿಷೇಧಿತ ಟ್ಯಾಬ್ಲೆಟ್ ಸೇವಿಸಿದ್ದ ವಾರ್ನ್ ಒಂದು ವರ್ಷ ನಿಷೇಧಕ್ಕೆ ಗುರಿಯಾಗಿದ್ದರು.
ನ್ಯೂಝಿಲೆಂಡ್ ಗೆಲುವು ತಪ್ಪಿಸಲು ಅಂಡರ್ ಆರ್ಮ್ ಬೌಲಿಂಗ್:
1981ರಲ್ಲಿ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ನ್ಯೂಝಿಲೆಂಡ್ ಗೆಲುವಿಗೆ 1 ಎಸೆತದಲ್ಲಿ 6 ರನ್ ಅಗತ್ಯವಿತ್ತು. ಆಸ್ಟ್ರೇಲಿಯ ನಾಯಕ ಗ್ರೆಗ್ ಚಾಪೆಲ್ ತಮ್ಮ ಕಿರಿಯ ಸಹೋದರ ಟ್ರೆವರ್ಗೆ ಅಂಡರ್-ಆರ್ಮ್ನಲ್ಲಿ ಬೌಲಿಂಗ್ ಮಾಡುವಂತೆ ಸೂಚಿಸಿದ್ದರು. ಸ್ಟ್ರೈಕ್ನಲ್ಲಿದ್ದ ಬ್ರಿಯಾನ್ ಮೆಕೆನೀ ಚೆಂಡನ್ನು ಸರಿಯಾಗಿ ಎದುರಿಸಲಾರದೇ ಬ್ಯಾಟ್ನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿದರು. 1980ರಲ್ಲಿ ವಿಶ್ವ ಕ್ರಿಕೆಟ್ನಲ್ಲಿ ನಡೆದ ಅತ್ಯಂತ ವಿವಾದಾತ್ಮಕ ಪಂದ್ಯ ಇದಾಗಿತ್ತು. 1980ರಲ್ಲಿ ಪಂದ್ಯದ ನಿಯಮದಡಿ ಅಂಡರ್ ಆರ್ಮ್ ಬೌಲಿಂಗ್ ಮಾಡಬಹುದಿತ್ತು. ಚಾಪೆಲ್ ನಿರ್ಧಾರ ಕ್ರೀಡಾ ಸ್ಫೂರ್ತಿಗೆ ವಿರುದ್ಧವಾಗಿತ್ತು.
2013ರಲ್ಲಿ ಹೋಮ್ವರ್ಕ್ ವಿವಾದ
2013ರ ಭಾರತ ಪ್ರವಾಸದ ವೇಳೆ ಆಸ್ಟ್ರೇಲಿಯ ತಂಡ ಮೊದಲೆರಡು ಟೆಸ್ಟ್ ಪಂದ್ಯಗಳನ್ನು ಸೋತಿತ್ತು. ಕೋಚ್ ಮಿಕ್ಕಿ ಅರ್ಥರ್ ನೀಡಿದ ಟಾಸ್ಕ್ನ್ನು ಪೂರೈಸಲು ವಿಫಲವಾಗಿದ್ದ ನಾಲ್ವರು ಆಟಗಾರರಾದ ಶೇನ್ ವ್ಯಾಟ್ಸನ್, ಮಿಚೆಲ್ ಜಾನ್ಸನ್, ಜೇಮ್ಸ್ ಪ್ಯಾಟಿನ್ಸನ್ ಹಾಗೂ ಉಸ್ಮಾನ್ ಖ್ವಾಜಾರನ್ನು 3ನೇ ಟೆಸ್ಟ್ನಿಂದ ಹೊರಗಿಡಲಾಗಿತ್ತು.
2013ರಲ್ಲಿ ರೂಟ್ರೊಂದಿಗೆ ವಾರ್ನರ್ ಮಾತಿನ ಚಕಮಕಿ
2013ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಇಂಗ್ಲೆಂಡ್ ವಿರುದ್ಧ ಸೋತ ಕೆಲವೇ ಗಂಟೆಗಳ ಬಳಿಕ ಆಸ್ಟ್ರೇಲಿಯದ ಡೇವಿಡ್ ವಾರ್ನರ್ ಇಂಗ್ಲೆಂಡ್ನ ಜೋ ರೂಟ್ ಅವರೊಂದಿಗೆ ಪಬ್ವೊಂದರಲ್ಲಿ ಮಾತಿನ ಚಕಮಕಿ ನಡೆಸಿದ್ದರು. ಈ ಘಟನೆಯ ಬಳಿಕ ವಾರ್ನರ್ರನ್ನು ಚಾಂಪಿಯನ್ಸ್ ಟ್ರೋಫಿಯ ಉಳಿದ ಪಂದ್ಯಗಳಿಂದ ಅಮಾನತುಗೊಳಿಸಲಾಗಿತ್ತು. 11,500 ಆಸ್ಟ್ರೇಲಿಯನ್ ಡಾಲರ್ ದಂಡ ವಿಧಿಸಲಾಗಿತ್ತು. ವಾರ್ನರ್ ಸಾರ್ವಜನಿಕವಾಗಿ ರೂಟ್ ಬಳಿ ಕ್ಷಮೆ ಕೋರಿದ್ದರು.
ಆ್ಯಶಸ್ ಪಂದ್ಯದಲ್ಲಿ ಬ್ಯಾಂಕ್ರಾಫ್ಟ್ರಿಂದ ಸಂಶಯಾಸ್ಪದ ವರ್ತನೆ
ಆಸ್ಟ್ರೇಲಿಯ ಕ್ರಿಕೆಟ್ ತಂಡಕ್ಕೆ ತೀವ್ರ ಹಿನ್ನಡೆ ಉಂಟು ಮಾಡಬಲ್ಲ ವೀಡಿಯೊವೊಂದು ನೈನ್ ಡಾಟ್ಕಾಮ್ ಟಾಟ್ ಏಯು ಆನ್ಲೈನ್ನಲ್ಲಿ ಹರಿದಾಡುತ್ತಿದೆ. ಇತ್ತೀಚೆಗೆ ದಕ್ಷಿಣ ಆಫ್ರಿಕ ವಿರುದ್ದ ಮೂರನೇ ಟೆಸ್ಟ್ನಲ್ಲಿ ಚೆಂಡು ವಿರೂಪ ನಡೆಸಿದ ಘಟನೆಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿರುವ ಆಸ್ಟ್ರೇಲಿಯ ಬ್ಯಾಟ್ಸ್ಮನ್ ಕ್ಯಾಮರೂನ್ ಬ್ಯಾಂಕ್ರಾಫ್ಟ್ ತನ್ನ ಜೇಬಿನಲ್ಲಿ ಒಂದು ಚಮಚ ಸಕ್ಕರೆ ಹಾಕಿಕೊಳ್ಳುತ್ತಿರುವ ದೃಶ್ಯ ವೀಡಿಯೊದಲ್ಲಿದೆ. ಇಂಗ್ಲೆಂಡ್ ವಿರುದ್ದ ಜನವರಿಯಲ್ಲಿ ನಡೆದ ಆ್ಯಶಸ್ ಸರಣಿಯ ವೇಳೆ ಈ ಘಟನೆ ನಡೆದಿತ್ತು.
‘‘ಜನವರಿಯಲ್ಲಿ ನಡೆದ ಇಂಗ್ಲೆಂಡ್ ವಿರುದ್ಧ ಪಂದ್ಯದ ವೇಳೆ ಕ್ಯಾಮರೂನ್ ಬ್ಯಾಂಕ್ರಾಫ್ಟ್ ತನ್ನ ಜೇಬಿಗೆ ಒಂದು ಚಮಚ ಸಕ್ಕರೆ ಹಾಕಿಕೊಳ್ಳುತ್ತಿರುವುದು ಇದರಲ್ಲಿದೆ’’ ಎಂದು ‘ದಿ ಸನ್’ ಪತ್ರಿಕೆಯ ವರದಿಗಾರ ಡೇವಿಡ್ ಕೊವರ್ಡೆಲ್ ವೀಡಿಯೊ ಸಮೇತ ಟ್ವೀಟ್ ಮಾಡಿದ್ದಾರೆ.
ಸಿಸಿಟಿವಿ ಫುಟೇಜ್ನಲ್ಲಿ ಬ್ಯಾಂಕ್ರಾಫ್ಟ್ ಅವರು ತನ್ನ ಎಡ ಜೇಬಿಗೆ ಏನೋ ಹಾಕಿಕೊಳ್ಳುತ್ತಿರುವುದು ಸ್ಪಷ್ಟವಾಗಿ ಕಂಡುಬಂದಿತ್ತು. ವೀಡಿಯೊ ಬಗ್ಗೆ ಹೆಚ್ಚ್ಚಿನ ಮಾಹಿತಿ ಈವರೆಗೆ ಬಂದಿಲ್ಲ.