ಕ್ರೀಡಾಗ್ರಾಮ ಪ್ರವೇಶಕ್ಕೆ ಸೈನಾ ತಂದೆಗೆ ಅನುಮತಿ
ಗೋಲ್ಡ್ಕೋಸ್ಟ್, ಎ.3: ತನ್ನ ತಂದೆಯನ್ನು ಗೇಮ್ಸ್ ವಿಲೇಜ್ ಹಾಗೂ ತಾನು ಆಡುವ ಪಂದ್ಯಗಳ ಸ್ಥಳಕ್ಕೆ ಆಗಮಿಸಲು ಅವಕಾಶ ನೀಡದಿರುವುದಕ್ಕೆ ಟ್ವಿಟರ್ನಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಸೈನಾ ನೆಹ್ವಾಲ್ ಕಿಡಿಕಾರಿದ ಬೆನ್ನಿಗೇ ಭಾರತೀಯ ಒಲಿಂಪಿಕ್ಸ್ ಸಂಸ್ಥೆ ಮಾನ್ಯತೆ ಪತ್ರ ನೀಡಿ ಎಲ್ಲ ಸಮಸ್ಯೆ ಬಗೆಹರಿಸಿದೆ.
ಸೈನಾ ತಂದೆ ಹರ್ವಿರ್ ಹೆಸರು ತಂಡದ ಅಧಿಕೃತ ವಿಭಾಗದಲ್ಲಿದೆ. ಸೈನಾ ಹಾಗೂ ಸಿಂಧು ಅವರ ಹೆತ್ತವರು ತಮ್ಮ ಸ್ವಂತ ಖರ್ಚಿನಲ್ಲಿ ಭಾರತ ದ ಅಥ್ಲೀಟ್ ತಂಡದೊಂದಿಗೆ ಆಸ್ಟ್ರೇಲಿಯಕ್ಕೆ ಪ್ರಯಾಣಿಸಬಹುದು ಎಂದು ಕ್ರೀಡಾ ಸಚಿವಾಲಯ ಸ್ಪಷ್ಟಪಡಿಸಿತ್ತು. ಆದರೆ, ಸೈನಾರ ತಂದೆಯ ಹೆಸರನ್ನು ಅಧಿಕೃತ ವಿಭಾಗದಿಂದ ತೆಗೆದುಹಾಕಲಾಗಿತ್ತು. ಹೀಗಾಗಿ ಹರ್ವಿರ್ಗೆ ತನ್ನ ಪುತ್ರಿಯೊಂದಿಗಿರಲು, ಕಾಮನ್ವೆಲ್ತ್ ಗೇಮ್ಸ್ ಕ್ರೀಡಾಗ್ರಾಮಕ್ಕೆ ಪ್ರವೇಶಿಸಲು ಹಾಗೂ ಮಗಳ ಪಂದ್ಯ ವೀಕ್ಷಿಸಲು ಅವಕಾಶ ನಿರಾಕರಿಸಲಾಗಿತ್ತು.
ಗೇಮ್ಸ್ ವಿಲೇಜ್ ಪ್ರವೇಶಿಸಲು ತನ್ನ ತಂದೆಗೆ ನಿರ್ಬಂಧಿಸಿದರೆ ತಾನು ಗೇಮ್ಸ್ನಲ್ಲಿ ಸ್ಪರ್ಧಿಸಲಾರೆ ಎಂದು ಸೈನಾ ಬೆದರಿಕೆ ಹಾಕಿದ್ದರು. ತನಗೆ ತಂದೆಯ ಬೆಂಬಲ ಅತ್ಯಂತ ಮುಖ್ಯ. ಇತರ ಪಂದ್ಯಗಳ ವೇಳೆ ತಾನು ಅವರನ್ನೇ ಅವಲಂಬಿಸಿದ್ದೇನೆ ಎಂದು ಕಾಮನ್ವೆಲ್ತ್ ಗೇಮ್ಸ್ ಫೆಡರೇಶನ್ನ್ನು ಉದ್ದೇಶಿಸಿ ಸೈನಾ ಟ್ವೀಟ್ ಮಾಡಿದ್ದರು.