ಶರಪೋವಾ ನಾಲ್ಕನೇ ಸುತ್ತಿಗೆ ಲಗ್ಗೆ
ಪ್ಯಾರಿಸ್, ಜೂ.2: ಐದು ಬಾರಿಯ ಗ್ರಾನ್ಸ್ಲಾಮ್ ಚಾಂಪಿಯನ್ ಮರಿಯಾ ಶರಪೋವಾ ಫ್ರೆಂಚ್ ಓಪನ್ನಲ್ಲಿ ನಾಲ್ಕನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ. ಇಲ್ಲಿ ಶನಿವಾರ ಕೇವಲ 59 ನಿಮಿಷಗಳಲ್ಲಿ ಕೊನೆಗೊಂಡ ಮಹಿಳೆಯರ ಸಿಂಗಲ್ಸ್ ನ ಮೂರನೇ ಸುತ್ತಿನ ಪಂದ್ಯದಲ್ಲಿ ಶರಪೋವಾ ಆರನೇ ಶ್ರೇಯಾಂಕದ ಕರೊಲಿನಾ ಪ್ಲಿಸ್ಕೋವಾರನ್ನು 6-2, 6-1 ನೇರ ಸೆಟ್ಗಳಿಂದ ಸೋಲಿಸಿದರು. ಡೋಪಿಂಗ್ ನಿಷೇಧದಿಂದ ಟೆನಿಸ್ಗೆ ವಾಪಸಾದ ಬಳಿಕ ಇದೇ ಮೊದಲ ಬಾರಿ ಶ್ರೇಷ್ಠ ಪ್ರದರ್ಶನ ನೀಡಿದ ಶರಪೋವಾ, ಪ್ಲಿಸ್ಕೋವಾ ವಿರುದ್ಧ ಏಕಪಕ್ಷೀಯವಾಗಿ ಪಂದ್ಯವನ್ನು ಗೆದ್ದುಕೊಂಡರು. 2012 ಹಾಗೂ 2014ರಲ್ಲಿ ಫ್ರೆಂಚ್ ಓಪನ್ ಸಿಂಗಲ್ಸ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ರಶ್ಯದ ಶರಪೋವಾ ಮುಂದಿನ ಸುತ್ತಿನಲ್ಲಿ 23 ಬಾರಿ ಗ್ರಾನ್ಸ್ಲಾಮ್ ಪ್ರಶಸ್ತಿ ವಿಜೇತೆ ಸೆರೆನಾ ವಿಲಿಯಮ್ಸ್ ಅಥವಾ ಜರ್ಮನಿಯ 11ನೇ ಶ್ರೇಯಾಂಕದ ಜುಲಿಯಾ ಜಾರ್ಜರ್ಸ್ರನ್ನು ಮುಖಾಮುಖಿಯಾಗುವ ಸಾಧ್ಯತೆಯಿದೆ. ಶರಪೋವಾ ಹಾಗೂ ಸೆರೆನಾ 21 ಬಾರಿ ಮುಖಾಮುಖಿಯಾಗಿದ್ದಾರೆ. ಅಮೆರಿಕದ ಆಟಗಾರ್ತಿ ಸೆರೆನಾ 19 ಬಾರಿ ಜಯ ಸಾಧಿಸಿ ಮೇಲುಗೈ ಸಾಧಿಸಿದ್ದಾರೆ.