ಪೋರ್ಚುಗಲ್ಗೆ ಉರುಗ್ವೆ ಎದುರಾಳಿ
ಸೋಚಿ, ಜೂ.29: ವಿಶ್ವಕಪ್ನ ಎರಡನೇ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ನೇತೃತ್ವದ ಪೋರ್ಚುಗಲ್ ತಂಡ ಡಿಯಾಗೊ ಗೊಡಿನ್ ನಾಯಕತ್ವದ ಉರುಗ್ವೆ ತಂಡವನ್ನು ಎದುರಿಸಲಿದೆ.
ರೊನಾಲ್ಡೊ ಗ್ರೂಪ್ ಹಂತದಲ್ಲಿ ಪೋರ್ಚುಗಲ್ ಗಳಿಸಿದ ಐದು ಗೋಲುಗಳ ಪೈಕಿ ನಾಲ್ಕು ಗೋಲು ಬಾರಿಸಿದ್ದಾರೆ. 85 ಅಂತರ್ರಾಷ್ಟ್ರೀಯ ಪಂದ್ಯಗಳನ್ನಾಡಿರುವ ರೊನಾಲ್ಡೊ ತಂಡಕ್ಕೆ ಮತ್ತೊಮ್ಮೆ ಆಸರೆಯಾಗುವ ವಿಶ್ವಾಸದಲ್ಲಿದ್ದಾರೆ.
‘ಎ’ ಗುಂಪಿನಲ್ಲಿ ಆಡಿರುವ ಎಲ್ಲ 3 ಪಂದ್ಯಗಳನ್ನು ಜಯಿಸಿದ್ದ ಉರುಗ್ವೆ ಎರಡನೇ ಸುತ್ತಿಗೆ ತಲುಪಿದೆ. ಈಜಿಪ್ಟ್, ಸೌದಿ ಅರೇಬಿಯ ಹಾಗೂ ರಶ್ಯದ ವಿರುದ್ಧ ಉರುಗ್ವೆ ಒಂದೂ ಗೋಲು ಬಿಟ್ಟುಕೊಟ್ಟಿಲ್ಲ. ಮತ್ತೊಂದೆಡೆ ಪೋರ್ಚುಗಲ್ ತಂಡ ಗ್ರೂಪ್ ಹಂತದಲ್ಲಿ 2 ಪಂದ್ಯವನ್ನು ಡ್ರಾ ಮಾಡಿಕೊಂಡಿತ್ತು. ಸ್ಪೇನ್ ವಿರುದ್ಧ 3-3 ರಿಂದ ಡ್ರಾ ಸಾಧಿಸಿದ್ದ ರೊನಾಲ್ಡೊ ಪಡೆ ಮೊರಾಕ್ಕೊ ವಿರುದ್ಧ ಪ್ರಯಾಸದ ಜಯ ಸಾಧಿಸಿತ್ತು. ಇರಾನ್ ವಿರುದ್ಧ 1-1ರಿಂದ ಡ್ರಾ ಸಾಧಿಸಿತ್ತು. ಉಭಯ ತಂಡಗಳು ಒಟ್ಟಾರೆ ಮೂರನೇ ಬಾರಿ, ವಿಶ್ವಕಪ್ನಲ್ಲಿ ಮೊದಲ ಬಾರಿ ಮುಖಾಮುಖಿಯಾಗುತ್ತಿವೆ. 1972ರ ವಿಶ್ವಕಪ್ ಬಳಿಕ ಮೊದಲ ಬಾರಿ ಸೆಣಸಾಡಲಿವೆ. ಪೆನಾಲ್ಟಿ ಶೂಟೌಟ್ ಹೊರತುಪಡಿಸಿ ಪೋರ್ಚುಗಲ್ ಪ್ರಮುಖ ಟೂರ್ನಿಯ ಕಳೆದ 17 ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಸೋತಿದೆ. ಉರುಗ್ವೆ 1930ರ ಬಳಿಕ ಸತತ ನಾಲ್ಕು ವಿಶ್ವಕಪ್ ಪಂದ್ಯಗಳನ್ನು ಜಯಿಸುವ ವಿಶ್ವಾಸದಲ್ಲಿದೆ. ಉರುಗ್ವೆ ತಂಡದ ಸ್ಟಾರ್ ಆಟಗಾರ ಲೂಯಿಸ್ ಸುಯರೆಝ್ ವಿಶ್ವಕಪ್ನಲ್ಲಿ 7 ಗೋಲುಗಳನ್ನು ಬಾರಿಸಿದ್ದಾರೆ. 2010ರ ವಿಶ್ವಕಪ್ನ ಪ್ರಿ-ಕ್ವಾರ್ಟರ್ನಲ್ಲಿ ದಕ್ಷಿಣ ಕೊರಿಯಾ ವಿರುದ್ಧ ಸುಯರೆಝ್ ಅವಳಿ ಗೋಲು ಗಳಿಸಿದ್ದರು.
ವಿಶ್ವಕಪ್ನ ನಾಕೌಟ್ ಹಂತದ ಪಂದ್ಯಗಳಲ್ಲಿ ರೊನಾಲ್ಡೊ ಪೋರ್ಚುಗಲ್ ಪರ ಈ ತನಕ ಒಂದೂ ಗೋಲು ಗಳಿಸಿಲ್ಲ. ಸೋಚಿ ಸ್ಟೇಡಿಯಂನಲ್ಲಿ ಸ್ಪೇನ್ ವಿರುದ್ಧ ನಡೆದ ಗ್ರೂಪ್ ಪಂದ್ಯದಲ್ಲಿ ಹ್ಯಾಟ್ರಿಕ್ ಗೋಲು ಬಾರಿಸಿದ್ದಾರೆ.