ಪೆನಾಲ್ಟಿ ಕದನದಲ್ಲಿ ಕ್ರೊವೇಶಿಯಾ ಕ್ವಾರ್ಟರ್ ಫೈನಲ್ಗೆ
ಫಿಫಾ ವಿಶ್ವಕಪ್-2018
ರಶ್ಯ, ಜು.2: ಫಿಫಾ ವಿಶ್ವಕಪ್ನ 16ರ ಘಟ್ಟದ ಪಂದ್ಯದಲ್ಲಿ ಪೆನಾಲ್ಟಿ ಶೂಟೌಟ್ನಲ್ಲಿ ಡೆನ್ಮಾರ್ಕ್ ವಿರುದ್ಧ 3-2 ಅಂತರದ ಜಯ ಸಾಧಿಸಿದ ಕ್ರೊವೇಶಿಯಾ ಎಂಟರ ಘಟ್ಟಕ್ಕೆ ಮುನ್ನಡೆಯಿತು. ನಿಗದಿತ ಸಮಯದಲ್ಲಿ ಉಭಯ ತಂಡಗಳು 1-1 ಸಮಬಲ ಸಾಧಿಸಿದ್ದವು. ಈ ಮೂಲಕ ಕ್ವಾರ್ಟರ್ ಫೈನಲ್ನಲ್ಲಿ ಆತಿಥೇಯ ತಂಡವನ್ನು ಎದುರಿಸುವ ಅರ್ಹತೆ ಪಡೆಯಿತು.
ನಿಜ್ನಿ ನೊವ್ಗೊರೊಡ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಹೆಚ್ಚುವರಿ ಅವಧಿ ಮುಗಿಯುವ ಐದು ನಿಮಿಷ ಮುನ್ನವೇ ಕ್ರೊವೇಶಿಯಾ ಗೆಲುವಿನ ದಡ ಸೇರಬೇಕಿತ್ತು. ಆದರೆ ಲೂಕಾ ಮಾಡ್ರಿಕ್ ಅವರ ಪೆನಾಲ್ಟಿಯನ್ನು ಕಾಸ್ಪರ್ ಶೆಮಿಚೆಲ್ ಅದ್ಭುತವಾಗಿ ತಡೆದು, ಪಂದ್ಯವನ್ನು ಪೆನಾಲ್ಟಿ ಶೂಟೌಟ್ಗೆ ಒಯ್ದರು.
ಡೆನ್ಮಾರ್ಕ್ನ ಮೂರು ಪ್ರಯತ್ನಗಳನ್ನು ಕ್ರೊವೇಶಿಯಾ ಗೋಲಿ ಡೆನಿಜೆಲ್ ಸಬಾಸಿಕ್ ವಿಫಲಗೊಳಿಸಿದರು. ಇದಕ್ಕೂ ಮುನ್ನ ಆರಂಭಿಕ ನಾಲ್ಕು ನಿಮಿಷಗಳಲ್ಲೇ ಎರಡು ಗೋಲುಗಳನ್ನು ಕಂಡ ಪಂದ್ಯದಲ್ಲಿ ಉಭಯ ತಂಡಗಳು ರಕ್ಷಣೆಗೆ ಒತ್ತು ನೀಡಿ ಯಥಾಸ್ಥಿತಿಯನ್ನು ಎರಡು ಗಂಟೆಗಳುದ್ದಕ್ಕೂ ಕಾಯ್ದುಕೊಂಡವು. 57ನೇ ಸೆಕೆಂಡ್ನಲ್ಲೇ ಕ್ರೊವೇಶಿಯಾದ ರಕ್ಷಣಾ ಗೋಡೆಯನ್ನು ಭೇದಿಸಿದ ಜಾರ್ಗೆನ್ಸನ್ ಡೆನ್ಮಾರ್ಕ್ಗೆ ಆರಂಭಿಕ ಮುನ್ನಡೆಗೆ ಕಾರಣರಾದರೆ, ನಾಲ್ಕನೇ ನಿಮಿಷದಲ್ಲಿ ಕ್ರೊವೇಶಿಯಾದ ಮಾರಿಯೊ ಮಂಡ್ಜುವಿಕ್ ತಿರುಗೇಟು ನೀಡಿ ಸಮಬಲ ಸಾಧಿಸಿದರು.