ಸೆರೆನಾ, ಕೆರ್ಬರ್, ಒಸ್ಟಾಪೆಂಕೊ, ಜಾರ್ಜಸ್ ಸೆಮಿಫೈನಲ್ಗೆ
ಲಂಡನ್,ಜು.10: ವಿಂಬಲ್ಡನ್ ಟೆನಿಸ್ ಚಾಂಪಿಯನ್ಶಿಪ್ನ ಮಹಿಳೆಯರ ಸಿಂಗಲ್ಸ್ ನಲ್ಲಿ ಸೆರೆನಾ ವಿಲಿಯಮ್ಸ್, ಆ್ಯಂಜೆಲಿಕ್ ಕೆರ್ಬರ್, ಜೆಲೆನಾ ಒಸ್ಟಾಪೆಂಕೊ ಹಾಗೂ ಜುಲಿಯಾ ಜಾರ್ಜಸ್ ಸೆಮಿ ಫೈನಲ್ಗೆ ಲಗ್ಗೆ ಇಟ್ಟಿದ್ದಾರೆ.
ಮೊದಲ ಸೆಮಿ ಫೈನಲ್ನಲ್ಲಿ ಜರ್ಮನಿಯ ಕೆರ್ಬರ್ ಲಾಟ್ವಿಯದ ಒಸ್ಟಾಪೆಂಕೊರನ್ನು ಎದುರಿಸಲಿದ್ದಾರೆ. 2ನೇ ಸೆಮಿ ಫೈನಲ್ನಲ್ಲಿ ಸೆರೆನಾ ಅವರು ಜರ್ಮನಿಯ ಜಾರ್ಜಸ್ರನ್ನು ಎದುರಿಸಲಿದ್ದಾರೆ. ಸೆರೆನಾ ಕ್ವಾ.ಫೈನಲ್ನಲ್ಲಿ ಇಟಲಿಯ ಕ್ಯಾಮಿಲಾ ಗಿಯೊರ್ಗಿ ಅವರನ್ನು 3-6, 6-3, 6-4 ಅಂತರದಿಂದ ಮಣಿಸಿ ವಿಂಬಲ್ಡನ್ನಲ್ಲಿ ಸತತ 19ನೇ ಜಯ ಸಾಧಿಸಿದ್ದಾರೆ. 8ನೇ ವಿಂಬಲ್ಡನ್ ಪ್ರಶಸ್ತಿಯ ನಿರೀಕ್ಷೆಯಲ್ಲಿರುವ ಸೆರೆನಾ ಮುಂದಿನ ಸುತ್ತಿನಲ್ಲಿ ಜಾರ್ಜಸ್ ಸವಾಲು ಎದುರಿಸಲಿದ್ದಾರೆ. ಜಾರ್ಜಸ್ ಮತ್ತೊಂದು ಕ್ವಾರ್ಟರ್ ಫೈನಲ್ನಲ್ಲಿ ಕಿಕಿ ಬೆರ್ಟೆನ್ಸ್ರನ್ನು 3-6, 7-5, 6-1 ಸೆಟ್ಗಳಿಂದ ಮಣಿಸಿದ್ದಾರೆ. ಸ್ಲೋವಾಕಿಯದ ಡೊಮಿನಿಕಾ ಸಿಬುಲ್ಕೊವಾರನ್ನು 7-5, 6-4 ರಿಂದ ಸೋಲಿಸಿದ ಜೆಲೆನಾ ಒಸ್ಟಾಪೆಂಕೊ ವಿಂಬಲ್ಡನ್ ಸಿಂಗಲ್ಸ್ನಲ್ಲಿ ಸೆಮಿ ಫೈನಲ್ಗೆ ತಲುಪಿದ ಲಾಟ್ವಿಯದ ಮೊದಲ ಆಟಗಾರ್ತಿ ಎನಿಸಿಕೊಂಡರು.
ಒಸ್ಟಾಪೆಂಕೊ ಮುಂದಿನ ಸುತ್ತಿನಲ್ಲಿ ಕೆರ್ಬರ್ರನ್ನು ಎದುರಿಸುವರು. ಕೆರ್ಬರ್ ಮತ್ತೊಂದು ಕ್ವಾರ್ಟರ್ ಫೈನಲ್ನಲ್ಲಿ ರಶ್ಯದ ಡರಿಯಾ ಕಸಟ್ಕಿನಾರನ್ನು 6-3, 7-5 ಸೆಟ್ಗಳಿಂದ ಸೋಲಿಸಿದ್ದಾರೆ.