ಟೀಮ್ ಇಂಡಿಯದೊಂದಿಗೆ ಫೋಟೊಕ್ಕೆ ಪೋಸ್ ನೀಡಿದ ಅನುಷ್ಕಾ ಶರ್ಮಾ!
ಬಿಸಿಸಿಐ ವಿರುದ್ಧ ಟ್ವಿಟರ್ನಲ್ಲಿ ಆಕ್ರೋಶ ವ್ಯಕ್ತಪಡಿಸಿದ ಅಭಿಮಾನಿಗಳು
ಲಂಡನ್, ಆ.8: ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಲಂಡನ್ನಲ್ಲಿರುವ ಭಾರತದ ಹೈಕಮಿಶನ್ ಮಂಗಳವಾರ ಭಾರತ ಕ್ರಿಕೆಟ್ ತಂಡಕ್ಕೆ ಔತಣಕೂಟವೊಂದನ್ನು ಏರ್ಪಡಿಸಿತ್ತು. ನಾಯಕ ಕೊಹ್ಲಿಯ ಪತ್ನಿ ಅನುಷ್ಕಾ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಲ್ಲರನ್ನು ಅಚ್ಚರಿಗೊಳಿಸಿದರು.
ಇಂಗ್ಲೆಂಡ್ ವಿರುದ್ಧ ಮೂರನೇ ಟೆಸ್ಟ್ ಮುಗಿಯುವ ತನಕ ಭಾರತದ ಆಟಗಾರರು ತಮ್ಮ ಪತ್ನಿ ಹಾಗೂ ಗೆಳತಿಯರ ಜೊತೆ ಇರಬಾರದು ಎಂದು ಬಿಸಿಸಿಐ ತಾಕೀತು ಮಾಡಿತ್ತು. ಆದಾಗ್ಯೂ ಬಾಲಿವುಡ್ ನಟಿಯೂ ಆಗಿರುವ ಅನುಷ್ಕಾ ಲಂಡನ್ಗೆ ಕೊಹ್ಲಿಯೊಂದಿಗೆ ಪ್ರಯಾಣಿಸಿದ್ದು ಹೇಗೆಂಬ ಕುರಿತು ಇನ್ನೂ ಸ್ಪಷ್ಟವಾಗಿಲ್ಲ.
ಟೀಮ್ ಇಂಡಿಯಾ ಸದಸ್ಯರೊಂದಿಗೆ ತಂಡದ ಉಪ ನಾಯಕನನ್ನು ಹಿಂದಕ್ಕೆ ಸರಿಸಿ ಮೊದಲ ಸಾಲಿನಲ್ಲಿ ನಿಂತು ಫೋಟೊಕ್ಕೆ ಪೋಸ್ ನೀಡಿರುವ ಅನುಷ್ಕಾ ಶರ್ಮಾ ವಿರುದ್ಧ ಕ್ರಿಕೆಟ್ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಅವಕಾಶ ಮಾಡಿಕೊಟ್ಟಿರುವ ಬಿಸಿಸಿಐ ಇಬ್ಬಗೆ ನೀತಿ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತ ಕ್ರಿಕೆಟ್ ತಂಡದ ಇತರ ಆಟಗಾರರಿಗೆ 3ನೇ ಟೆಸ್ಟ್ ಕೊನೆಗೊಳ್ಳುವ ತನಕ ಕುಟುಂಬದಿಂದ ದೂರವಿರಬೇಕೆಂದು ಸೂಚಿಸಿದ್ದ ಬಿಸಿಸಿಐ ಅನುಷ್ಕಾ ಶರ್ಮಾಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿದ್ದಲ್ಲದೆ ವಿಶೇಷ ಆತಿಥ್ಯ ನೀಡಿದ್ದಕ್ಕೆ ಟೀಕೆಗಳು ವ್ಯಕ್ತವಾಗಿವೆ.
‘‘ತಂಡದ ಉಪ ನಾಯಕ ಕೊನೆಯ ಸಾಲಿನಲ್ಲಿದ್ದರೆ, ಭಾರತ ಕ್ರಿಕೆಟ್ ತಂಡದ ‘ಫಸ್ಟ್ ಲೇಡಿ’ ಮೊದಲ ಸಾಲಿನಲ್ಲಿದ್ದಾರೆ. ಇಂತಹ ವ್ಯಕ್ತಿಗಳು ಕೆಲವೇ ದಿನಗಳ ಹಿಂದೆ ಆನ್ಲೈನ್ನಲ್ಲಿ ಎಲ್ಲರಿಗೂ ಬುದ್ದಿಮಾತು ಹೇಳುತ್ತಿದ್ದರು’’ ಎಂದು ಓರ್ವ ಅಭಿಮಾನಿ ಟ್ವೀಟ್ ಮಾಡಿದ್ದಾರೆ.
‘‘ಅನುಷ್ಕಾ ಶರ್ಮಾ ಭಾರತ ತಂಡದ ಸದಸ್ಯೆಯಲ್ಲ. ಅವರಿಗೆ ಅಲ್ಲಿ ಅವಕಾಶ ನೀಡಿದ್ದೇಕೆ?ಇದು ಸ್ವೀಕಾರಾರ್ಹವಲ್ಲ. ಸರಣಿ ಆರಂಭವಾದ ತಕ್ಷಣ ಭಾರತ ತಂಡದ ಆಟಗಾರರ ಕುಟುಂಬ ಸದಸ್ಯರನ್ನು ಲಂಡನ್ಗೆ ತೆರಳದಂತೆ ನಿಷೇಧಿಸಿದ್ದ ಬಿಸಿಸಿಐ ಕೆಲವರಿಗಷ್ಟೇ ವಿಶೇಷ ಆದ್ಯತೆ ನೀಡಿದ್ದು ಎಷ್ಟು ಸರಿ?’’ ಎಂದು ಇನ್ನೊಬ್ಬರು ಪ್ರಶ್ನಿಸಿದ್ದಾರೆ.
ಅನುಷ್ಕಾ ಶರ್ಮ ಬರ್ಮಿಂಗ್ಹ್ಯಾಮ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಹಾಜರಾಗಿದ್ದರು.