ಮಿಕ್ಸಡ್ ಟೀಮ್ ಸ್ಪರ್ಧೆಯಲ್ಲಿ ದೀಪಿಕಾ, ಅತನು ದಾಸ್ಗೆ ಸೋಲು
ಆರ್ಚರಿ
ಜಕಾರ್ತ, ಆ.24: ಭಾರತದ ರಿಕರ್ವ್ ಆರ್ಚರಿಗಳ ಪರದಾಟ ಮುಂದುವರಿದಿದ್ದು ಏಶ್ಯನ್ ಗೇಮ್ಸ್ನ ಮಿಕ್ಸಡ್ ಟೀಮ್ ಸ್ಪರ್ಧೆಯಲ್ಲಿ ದೀಪಿಕಾ ಕುಮಾರಿ ಹಾಗೂ ಅತನು ದಾಸ್ ಕೆಳ ರ್ಯಾಂಕಿನ ಮಂಗೋಲಿಯ ವಿರುದ್ಧ ಆಘಾತಕಾರಿ ಸೋಲನುಭವಿಸಿದ್ದಾರೆ.
ದೀಪಿಕಾ-ಅತನು ಜೋಡಿ ಮಿಕ್ಸಡ್ ಟೀಮ್ ಕ್ವಾರ್ಟರ್ ಫೈನಲ್ನಲ್ಲಿ 4-5 ಅಂತರದಿಂದ ಸೋಲುಂಡಿದೆ. ಈ ಮೂಲಕ ಒತ್ತಡದ ಪರಿಸ್ಥಿತಿಯಲ್ಲಿ ದೀಪಿಕಾ ಮತ್ತೊಮ್ಮೆ ಎಡವಿದ್ದಾರೆ. ಇದೇ ವೇಳೆ ಅಭಿಷೇಕ್ ವರ್ಮಾ ಹಾಗೂ ಜ್ಯೋತಿ ಸುರೇಖಾ ಅವರನ್ನೊಳಗೊಂಡ ಭಾರತದ ಕಾಂಪೌಂಡ್ ತಂಡ ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಿದೆ. ಅಭಿಷೇಕ್-ಜ್ಯೋತಿ ಇರಾಕ್ನ ಫಾತಿಮಾ ಸಾದ್ ಮಹಮೂದ್ ಹಾಗೂ ಇಸಾಕ್ ಇಬ್ರಾಹಿಂ ಮುಹಮ್ಮದ್ ವಿರುದ್ಧ 155-147 ಅಂತರದಿಂದ ಜಯ ಸಾಧಿಸಿದ್ದಾರೆ.
ಅಭಿಷೇಕ್-ಜ್ಯೋತಿ ಮುಂದಿನ ಸುತ್ತಿನಲ್ಲಿ ಇರಾನ್ ತಂಡವನ್ನು ಎದುರಿಸಲಿದ್ದಾರೆ.
ಮಿಕ್ಸೆಡ್ ಟೀಮ್ ಸ್ಪರ್ಧೆಯಲ್ಲಿ ವಿಶ್ವದ ಏಳನೇ ರ್ಯಾಂಕಿನ ದೀಪಿಕಾ ಹಾಗೂ 19ನೇ ರ್ಯಾಂಕಿನ ಅತನು ಮಂಗೋಲಿಯ ವಿರುದ್ಧ ಜಯ ಸಾಧಿಸುವ ನೆಚ್ಚಿನ ಜೋಡಿಯಾಗಿದ್ದರು. ಮಂಗೋಲಿಯ ಜೋಡಿ ಮೊದಲ ಸೆಟ್ನಲ್ಲಿ 2-0 ಮುನ್ನಡೆ ಸಾಧಿಸಿತು. ಭಾರತ ತಂಡ ಇನ್ನೆರಡು ಸೆಟ್ನಲ್ಲಿ ತಿರುಗೇಟು ನೀಡಿತು. ಆದರೆ, ನಾಲ್ಕನೇ ಸೆಟ್ನಲ್ಲಿ ಮತ್ತೊಮ್ಮೆ ಮುಗ್ಗರಿಸಿತು.