ಕುರಾಶ್: ಜ್ಯೋತಿ, ಅಮಿಶಾ ಅಭಿಯಾನ ಅಂತ್ಯ
ಜಕಾರ್ತ, ಆ.30: ಏಶ್ಯಾಗೇಮ್ಸ್ನ ಕುರಾಶ್ ಸ್ಪರ್ಧೆಯ ಮಹಿಳೆಯರ 78 ಕೆಜಿ ವಿಭಾಗದಲ್ಲಿ ಭಾರತದ ಜ್ಯೋತಿ ಟೊಕಾಸ್ ಹಾಗೂ ಅಮಿಶಾ ಟೊಕಾಸ್ ಅಭಿಯಾನ ಅಂತ್ಯವಾಗಿದೆ. ಜ್ಯೋತಿ ಹಾಗೂ ಅಮಿಶಾ ಗುರುವಾರ ನಡೆದ ಪ್ರಿ-ಕ್ವಾರ್ಟರ್ ಫೈನಲ್ನಲ್ಲಿ ಮುಗ್ಗರಿಸಿದ್ದಾರೆ. 15ರ ಹರೆಯದ ಜ್ಯೋತಿ ತುರ್ಕ್ಮೆನಿಸ್ತಾನದ ಮರಿಯಾ ಲೊಹೊವಾ ವಿರುದ್ಧ 0-10 ಅಂತರದಿಂದಲೂ, 17ರ ಹರೆಯದ ಅಮಿಶಾ ವಿಯೆಟ್ನಾಂನ ಎನ್ಗುಯೆನ್ ಥಿ ಲಾನ್ ವಿರುದ್ಧ 0-5 ಅಂತರದಿಂದ ಸೋತಿದ್ದಾರೆ.
ಪುರುಷರ 90 ಕೆಜಿ ಇವೆಂಟ್ನ ಕ್ವಾರ್ಟರ್ ಫೈನಲ್ನಲ್ಲಿ ಭಾರತದ ಇನ್ನೋರ್ವ ಸ್ಪರ್ಧಿ ದನೀಶ್ ಶರ್ಮಾ ಕುವೈಟ್ನ ಮಿಸ್ರಿ ಹುಸೇನ್ ವಿರುದ್ಧ 0-10 ಅಂತರದಿಂದ ಶರಣಾದರು. ಶರ್ಮಾ ಇಂಡೋನೇಶ್ಯಾದ ಮುಹಮ್ಮದ್ ದಿಫಾರನ್ನು 3-0 ಅಂತರದಿಂದ ಸೋಲಿಸಿ ಅಂತಿಮ-8ರ ಸುತ್ತು ತಲುಪಿದ್ದರು.
ಇದಕ್ಕೆ ಮೊದಲು ನಡೆದ ಪುರುಷರ 90 ಕೆಜಿ ತೂಕ ವಿಭಾಗದ ಅಂತಿಮ-16ರ ಸುತ್ತಿನಲ್ಲಿ ದಿವೇಶ್ ಉಜ್ಬೇಕಿಸ್ತಾನದ ಯಖಿಯೊ ಇಮಾಮೊವ್ ವಿರುದ್ಧ 0-10 ರಿಂದ ಸೋತಿದ್ದಾರೆ. ಗುರುವಾರ ಕುರಾಶ್ನಲ್ಲಿ ಭಾಗವಹಿಸಿದ್ದ ಭಾರತ ನಾಲ್ವರೂ ಸ್ಪರ್ಧಿಗಳು ಸೋತು ಗೇಮ್ಸ್ನಿಂದ ಹೊರಗುಳಿದಿದ್ದಾರೆ.