ಬಾಕ್ಸಿಂಗ್: ಅಮಿತ್ ಫೈನಲ್ಗೆ
ಜಕಾರ್ತ, ಸೆ.1: ಭಾರತದ ಬಾಕ್ಸರ್ ಅಮಿತ್ ಪಾಂಘಲ್ ಏಶ್ಯನ್ ಗೇಮ್ಸ್ನಲ್ಲಿ ಫೈನಲ್ಗೆ ತಲುಪಿದ್ದಾರೆ. ಅಮಿತ್ ಈ ವರ್ಷದ ಗೇಮ್ಸ್ ನಲ್ಲಿ ಚಿನ್ನದ ಪದಕ ಸುತ್ತಿಗೆ ತಲುಪಿರುವ ಭಾರತದ ಏಕೈಕ ಬಾಕ್ಸರ್ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ಇಲ್ಲಿ ಶುಕ್ರವಾರ ನಡೆದ ಪುರುಷರ 49 ಕೆಜಿ ಲೈಟ್ ಫ್ಲೈ ವಿಭಾಗದಲ್ಲಿ ಅತ್ಯಂತ ಪೈಪೋಟಿಯಿಂದ ಕೂಡಿದ್ದ ಸೆಮಿ ಫೈನಲ್ನಲ್ಲಿ ಅಮಿತ್ ಫಿಲಿಪ್ಪೀನ್ಸ್ನ ಪಾಲಮ್ ಕಾರ್ಲೊರನ್ನು 3-2 ಅಂತರದಿಂದ ಸೋಲಿಸಿದ್ದಾರೆ.
ಶನಿವಾರ ಭಾರತೀಯ ಕಾಲಮಾನ ಮಧ್ಯಾಹ್ನ 12:30ಕ್ಕೆ ನಡೆಯಲಿರುವ ಫೈನಲ್ನಲ್ಲಿ ಉಜ್ಬೇಕಿಸ್ತಾನದ ರಿಯೋ ಒಲಿಂಪಿಕ್ಸ್ ಚಾಂಪಿಯನ್ ಹಸನ್ಬಾಯ್ ದಸ್ಮಟೊವ್ ಸವಾಲು ಎದುರಿಸಲಿದ್ದಾರೆ.
ಹರ್ಯಾಣದ ಯೋಧ ಅಮಿತ್ ಈ ವರ್ಷಾರಂಭದಲ್ಲಿ ನಡೆದಿದ್ದ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಬೆಳ್ಳಿ ಪದಕವನ್ನು ಜಯಿಸಿದ್ದರು. ಬಲ್ಗೇರಿಯದಲ್ಲಿ ನಡೆದಿದ್ದ ಪ್ರತಿಷ್ಠಿತ ಸ್ಟ್ರಾಂಡ್ಜಾ ಸ್ಮಾರಕ ಟೂರ್ನಿಯಲ್ಲಿ ಚಿನ್ನದ ಪದಕ ಜಯಿಸಿದ್ದರು.
ವಿಕಾಸ್ ಕ್ರಿಶನ್ ಕಣ್ಣಿನ ಗಾಯದ ಹಿನ್ನೆಲೆಯಲ್ಲಿ ಸೆಮಿ ಫೈನಲ್ ಸ್ಪರ್ಧೆಯಿಂದ ಹಿಂದೆ ಸರಿದ ಕಾರಣ ಅಮಿತ್ ಬಾಕ್ಸಿಂಗ್ ನಲ್ಲಿ ಭಾರತದ ಏಕೈಕ ಸ್ಪರ್ಧಿಯಾಗಿದ್ದಾರೆ.