ಏಷ್ಯಾ ಕಪ್ ಪಂದ್ಯ ವೀಕ್ಷಿಸಲು ಹಣವಿಲ್ಲ: ಸಚಿನ್ ಅಭಿಮಾನಿ ಸುಧೀರ್ ಗೆ ನೆರವಾದ ಪಾಕ್ ಕ್ರಿಕೆಟ್ ಅಭಿಮಾನಿ
ಹೊಸದಿಲ್ಲಿ, ಸೆ.19: ಸಂಯುಕ್ತ ಅರಬ್ ಸಂಸ್ಥಾನದಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಪಂದ್ಯಾವಳಿಯನ್ನು ವೀಕ್ಷಿಸುವ ಸಲುವಾಗಿ ಅಲ್ಲಿಗೆ ಪಯಣಿಸಲು ಹಣವಿಲ್ಲದ ಸಚಿನ್ ತೆಂಡೂಲ್ಕರ್ ರ ಅಭಿಮಾನಿಯ ಪ್ರವಾಸಕ್ಕಾಗಿ ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಯೊಬ್ಬರು ಸಹಾಯ ಮಾಡಿದ್ದಾರೆ.
ಭಾರತದ ಕ್ರಿಕೆಟ್ ಅಭಿಮಾನಿ ಸುಧೀರ್ ಗೌತಮ್ ಅವರು ಆಗಾಗ ಕ್ರಿಕೆಟ್ ಸ್ಟೇಡಿಯಂಗಳಲ್ಲಿ ಭಾರತದ ರಾಷ್ಟ್ರಧ್ವಜದ ಬಣ್ಣದ ಪೈಂಟ್ ಮೈಗೆ ಬಳಿದುಕೊಂಡು ಕಾಣಿಸಿಕೊಂಡು ತಂಡದ ಆಟಗಾರರನ್ನು ಹುರಿದುಂಬಿಸುತ್ತಿರುವ ದೃಶ್ಯ ಸಾಮಾನ್ಯ. ಆದರೆ ಏಷ್ಯಾ ಕಪ್ ವೀಕ್ಷಿಸಲು ಹೊಂದಿಸುವುದು ಅವರಿಗೆ ಅಸಾಧ್ಯ ಎಂದು ಅರಿತ ಪಾಕಿಸ್ತಾನದ ಕ್ರಿಕೆಟ್ ಸೂಪರ್ ಫ್ಯಾನ್ ಮುಹಮ್ಮದ್ ಬಾಷಿರ್ ಅಥವಾ ‘ಚಾಚಾ ಚಿಕಾಗೋ’ ಕೂಡಲೇ ಸ್ಪಂದಿಸಿ ಗೌತಮ್ ಅವರ ಪ್ರವಾಸಕ್ಕೆ ಏರ್ಪಾಟು ಮಾಡಿದ್ದರು.
“ನಾನೊಬ್ಬ ಶ್ರೀಮಂತ ವ್ಯಕ್ತಿಯಲ್ಲದೇ ಇದ್ದರೂ ವಿಶಾಲ ಹೃದಯದವನು. ನಿಮಗೆ ಸಹಾಯ ಮಾಡಿದರೆ ಅಲ್ಲಾಹ್ ಗೆ ಸಂತೋಷವಾಗುತ್ತದೆ'' ಎಂದು ಬಾಷಿರ್ ಅವರು ಗೌತಮ್ ಗೆ ಹೇಳಿದ್ದರು.
ಅಂತೆಯೇ ಅವರ ಸಹಾಯದಿಂದ ಸಂಯುಕ್ತ ಅರಬ್ ಸಂಸ್ಥಾನಕ್ಕೆ ತೆರಳಿದ್ದ ಗೌತಮ್ ಅಲ್ಲಿ ಚಾಚಾ ಚಿಕಾಗೋ ಮತ್ತು ಬಾಂಗ್ಲಾ ತಂಡದ ಶೋಯೆಬ್ ಟೈಗರ್ ಜತೆ ತಾವಿರುವ ಚಿತ್ರ ಪೋಸ್ಟ್ ಮಾಡಿ `ಕ್ರಿಕೆಟ್ ಬಿಯಾಂಡ್ ಬಾರ್ಡರ್ಸ್' ಎಂಬ ಶೀರ್ಷಿಕೆ ಅದಕ್ಕೆ ನೀಡಿದ್ದರು.
ಇಂದು ಚಾಚಾ ಚಿಕಾಗೋ ಮತ್ತು ಗೌತಮ್ ಜತೆಯಾಗಿ ದುಬೈಯಲ್ಲಿ ನಡೆಯಲಿರುವ ಭಾರತ-ಪಾಕ್ ಪಂದ್ಯ ವೀಕ್ಷಿಸಲಿದ್ದಾರೆ. ಗೌತಮ್ ಅವರು ಚಿಕ್ಕಂದಿನಿಂದಲೂ ಸಚಿನ್ ಅವರ ಕಟ್ಟಾ ಅಭಿಮಾನಿಯಾಗಿದ್ದು ಕ್ರಿಕೆಟ್ ಮ್ಯಾಚ್ ನೋಡಲು ತಮ್ಮ ವಿವಾಹವನ್ನೂ ಮುಂದೂಡಿದವರು. ಇಂದಿನ ಪಂದ್ಯದ ಮೊದಲು ಅವರು ಪೋಸ್ಟ್ ಮಾಡಿರುವ ಚಿತ್ರದಲ್ಲಿ ಅವರ ಬೆನ್ನ ಹಿಂದೆ `ವಿ ಮಿಸ್ ಯು ತೆಂಡುಲ್ಕರ್' ಎಂದು ಪೈಂಟ್ ಮಾಡಲಾಗಿರುವುದು ಕಾಣಿಸುತ್ತದೆ.