ಏಶ್ಯಕಪ್ ಸೂಪರ್-4: ಪಾಕ್ ಗೆಲುವಿಗೆ 258 ರನ್ ಗುರಿ
ಅಬುಧಾಬಿ, ಸೆ.21: ಹಶ್ಮತುಲ್ಲಾ ಶಾಹಿದಿ(ಔಟಾಗದೆ 97)ಹಾಗೂ ಅಸ್ಘರ್ ಅಫ್ಘಾನ್(67) ಅವರ ಆಕರ್ಷಕ ಅರ್ಧಶತಕಗಳ ಕೊಡುಗೆ ನೆರವಿನಿಂದ ಅಫ್ಘಾನಿಸ್ತಾನ ತಂಡ ಪಾಕಿಸ್ತಾನ ವಿರುದ್ಧ ಏಶ್ಯಕಪ್ನ ಸೂಪರ್-4 ಹಂತದ ಎರಡನೇ ಪಂದ್ಯದಲ್ಲಿ 50 ಓವರ್ಗಳಲ್ಲಿ 6 ವಿಕೆಟ್ಗಳ ನಷ್ಟಕ್ಕೆ 257 ರನ್ ಕಲೆಹಾಕಿದೆ.
ಶುಕ್ರವಾರ ಟಾಸ್ ಜಯಿಸಿದ ಅಫ್ಘಾನಿಸ್ತಾನ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. 11ನೇ ಓವರ್ನಲ್ಲಿ 31 ರನ್ಗೆ 2 ವಿಕೆಟ್ ಕಳೆದುಕೊಂಡ ಅಫ್ಘಾನ್ ಕಳಪೆ ಆರಂಭ ಪಡೆದಿತ್ತು. ಆಗ ಮೂರು ಜೊತೆಯಾಟದಲ್ಲಿ ಭಾಗಿಯಾದ ಶಾಹಿದಿ ತಂಡದ ಮೊತ್ತವನ್ನು 250ರ ಗಡಿ ದಾಟಿಸಿದರು. ಮೂರನೇ ವಿಕೆಟ್ಗೆ ರಹಮತ್ ಶಾ(36) ಅವರೊಂದಿಗೆ 63 ರನ್ ಸೇರಿಸಿದ ಶಾಹಿದಿ ಆ ನಂತರ ನಾಯಕ ಅಫ್ಘಾನ್(67,56 ಎಸೆತ,2 ಬೌಂಡರಿ,5 ಸಿಕ್ಸರ್) ಅವರೊಂದಿಗೆ 4ನೇ ವಿಕೆಟ್ಗೆ 94 ರನ್ ಜೊತೆಯಾಟ ನಡೆಸಿ ತಂಡಕ್ಕೆ ಆಸರೆಯಾದರು. 7ನೇ ವಿಕೆಟ್ಗೆ ಮುರಿಯದ ಜೊತೆಯಾಟದಲ್ಲಿ 45 ರನ್ ಸೇರಿಸಿದ ಶಾಹಿದಿ ಅವರು ಅಫ್ಘಾನ್ ತಂಡ ಪಾಕ್ ಗೆಲುವಿಗೆ ಸವಾಲಿನ ಮೊತ್ತ ನೀಡಲು ನೆರವಾದರು.
118 ಎಸೆತಗಳಲ್ಲಿ 97 ರನ್(7 ಬೌಂಡರಿ)ಗಳಿಸಿದ ಶಾಹಿದಿ ಕೇವಲ 3 ರನ್ನಿಂದ ಶತಕ ವಂಚಿತರಾದರು.
ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಭರ್ಜರಿ ಜಯ ಸಾಧಿಸಿರುವ ಅಫ್ಘಾನ್ ತಂಡದ ಪರ ಇಂದು ಆರಂಭಿಕ ಆಟಗಾರ ಮುಹಮ್ಮದ್ ಶಾಝಾದ್ 20 ರನ್ ಗಳಿಸಿ ಔಟಾದರು.
ಪಾಕ್ ಬೌಲಿಂಗ್ನಲ್ಲಿ ಮುಹಮ್ಮದ್ ನವಾಝ್(57ಕ್ಕೆ3) ಯಶಸ್ವಿ ಬೌಲರ್ ಎನಿಸಿಕೊಂಡರು. ಶಾಹೀನ್ ಅಫ್ರಿದಿ(38ಕ್ಕೆ2)ಎರಡು ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್
ಅಫ್ಘಾನಿಸ್ತಾನ: 50 ಓವರ್ಗಳಲ್ಲಿ 257/6
(ಶಾಹಿದಿ ಔಟಾಗದೆ 97, ಅಸ್ಘರ್ ಅಫ್ಘಾನ್ 67, ರಹಮತ್ 36, ಶಾಝಾದ್ 20, ನವಾಝ್ 57ಕ್ಕೆ3, ಶಾಹೀನ್ ಅಫ್ರಿದಿ 38ಕ್ಕೆ2)