ಏಶ್ಯನ್ ಪ್ಯಾರಾ ಗೇಮ್ಸ್: ಭಾರತಕ್ಕೆ 72 ಪದಕ
ಕ್ರೀಡಾಕೂಟದಲ್ಲಿ ಭಾರತದ ಉತ್ತಮ ಸಾಧನೆ
ಜಕಾರ್ತ, ಅ.13: ಶನಿವಾರ ಕೊನೆಗೊಂಡ ಏಶ್ಯನ್ ಪ್ಯಾರಾ ಗೇಮ್ಸ್ನಲ್ಲಿ ಭಾರತ 72 ಪದಕಗಳನ್ನು ಗೆದ್ದು ಉತ್ತಮ ಸಾಧನೆ ಮಾಡಿದೆ. 15 ಚಿನ್ನ , 24 ಬೆಳ್ಳಿ, 33 ಕಂಚು ಪಡೆದು ಭಾರತ ಕೂಟದಲ್ಲಿ 9ನೇ ಸ್ಥಾನ ಗಿಟ್ಟಿಸಿಕೊಂಡಿದೆ.
2014ರ ಆವೃತ್ತಿಯಲ್ಲಿ ಭಾರತ 33 ಪದಕ(3 ಚಿನ್ನ, 14 ಬೆಳ್ಳಿ, 16 ಕಂಚು) ಪಡೆದಿತ್ತು.
ಪುರುಷರ ಎಸ್ಎಲ್ ಕ್ಲಾಸ್ ಬ್ಯಾಡ್ಮಿಂಟನ್ನಲ್ಲಿ ಭಾರತದ ಪ್ರಮೋದ್ ಭಗತ್ ಅವರು ಇಂಡೋನೇಶ್ಯದ ಉಕೆನ್ ರುಕಾಯೆಂಡಿ ವಿರುದ್ಧ 21-19, 15-21, 21-14 ಅಂತರದಲ್ಲಿ ಜಯ ಗಳಿಸಿ ಚಿನ್ನ ಪಡೆದರು.
ಪ್ಯಾರಾ ಶಟ್ಲರ್ ತರುಣ್ ಪುರುಷರ ಸಿಂಗಲ್ಸ್ ನಲ್ಲಿ (ಎಸ್ಎಲ್4 ಕ್ಲಾಸ್)ನ ಚೀನಾದ ಯುಯಾಂಗ್ ಗಾವೋ ವಿರುದ್ಧ 21-16, 21-6 ಅಂತರದಲ್ಲಿ ಜಯ ಸಾಧಿಸಿ ಚಿನ್ನ ಜಮೆ ಮಾಡಿದ್ದರು.
ಚೀನಾ ಕೂಟದಲ್ಲಿ 172 ಚಿನ್ನ, 88 ಬೆಳ್ಳಿ ಮತ್ತು 59 ಕಂಚು ಪಡೆದು ಅಗ್ರಸ್ಥಾನ ಪಡೆದಿದೆ. ದಕ್ಷಿಣ ಕೊರಿಯಾ( 53ಚಿನ್ನ, 25 ಬೆಳ್ಳಿ, 47 ಕಂಚು) ಎರಡನೇ ಸ್ಥಾನ ಮತ್ತು ಇರಾನ್(51 ಚಿನ್ನ, 42 ಬೆಳ್ಳಿ, 43 ಕಂಚು) ಮೂರನೇ ಸ್ಥಾನ ಗಳಿಸಿದೆ.