ಕೋಲ್ಕತಾ: ವಿದ್ಯುದಾಘಾತಕ್ಕೆ ಬ್ಯಾಡ್ಮಿಂಟನ್ ಆಟಗಾರ ಬಲಿ
ಕೋಲ್ಕತಾ, ನ.26: ಬಂಗಾಳದ ನಂ.1 ಡಬಲ್ಸ್ ಬ್ಯಾಡ್ಮಿಂಟನ್ ಆಟಗಾರ ತ್ರಿನಾಂಕೂರ್ ನಾಗ್ ಕೋಲ್ಕತಾದ ರೈಲ್ವೆ ಕಾರ್ ಶೆಡ್ನಲ್ಲಿ ಕೆಲಸ ಮಾಡುತ್ತಿದ್ದಾಗ ವಿದ್ಯುದಾಘಾತದಿಂದ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ ಎಂದು ಪೂರ್ವ ರೈಲ್ವೆ ವಕ್ತಾರರು ಸೋಮವಾರ ತಿಳಿಸಿದ್ದಾರೆ.
26ರ ಹರೆಯದ ಬ್ಯಾಡ್ಮಿಂಟನ್ ಆಟಗಾರ ನಾಗ್ ಶನಿವಾರ ಕಾಂಕುರ್ಗಾಚಿ ಕಾರ್ ಶೆಡ್ನಲ್ಲಿ ಹೆಚ್ಚು ಒತ್ತಡದ ವಿದ್ಯುತ್ ತಂತಿ ತಾಗಿ ಗಂಭೀರ ಗಾಯಗೊಂಡಿದ್ದರು. ಅವರಿಗೆ ಪೂರ್ವ ರೈಲ್ವೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇಂದು ಬೆಳಗ್ಗೆ ಅವರು ಮೃತಪಟ್ಟಿದ್ದಾರೆ ಎಂದು ವಕ್ತಾರರು ತಿಳಿಸಿದ್ದಾರೆ. ನಾಗ್ ಕ್ರೀಡಾಕೋಟಾದಲ್ಲಿ ಕಳೆದ 5 ವರ್ಷಗಳ ಹಿಂದೆ ರೈಲ್ವೆಯಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದರು. ಪ್ರಸ್ತುತ ರಾಜ್ಯದ ನಂ.1 ಡಬಲ್ಸ್ ಆಟಗಾರನಾಗಿದ್ದ ಅವರು ಜೂನಿಯರ್ ಹಾಗೂ ಸೀನಿಯರ್ ವಿಭಾಗದಲ್ಲಿ ಹಲವು ವರ್ಷಗಳ ಕಾಲ ಬಂಗಾಳವನ್ನು ಪ್ರತಿನಿಧಿಸಿದ್ದಾರೆ. ನಾಗ್ ತಂದೆ-ತಾಯಿಯನ್ನು ಅಗಲಿದ್ದಾರೆ.
Next Story