ಅಡಿಲೇಡ್ ಟೆಸ್ಟ್: ಆಸೀಸ್ಗೆ ಭಾರತ ತಿರುಗೇಟು
ಅಡಿಲೇಡ್, ಡಿ.7: ಆಸ್ಟ್ರೇಲಿಯಾ ಮತ್ತು ಪ್ರವಾಸಿ ಭಾರತ ನಡುವೆ ಬಾರ್ಡರ್- ಗಾವಸ್ಕರ್ ಟ್ರೋಫಿಗಾಗಿ ನಡೆಯುವ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದ ಎರಡನೇ ದಿನವಾದ ಶುಕ್ರವಾರ ಆಸ್ಟ್ರೇಲಿಯಾ ತನ್ನ ಮೊದಲ ಇನಿಂಗ್ಸ್ ಆರಂಭಿಸಿದ್ದು, 4 ವಿಕೆಟ್ ನಷ್ಟಕ್ಕೆ 93 ರನ್ ಗಳಿಸಿ ಆಡುತ್ತಿದೆ. ಈಗಾಗಲೇ 3 ವಿಕೆಟ್ ಗಳನ್ನು ಕಿತ್ತಿರುವ ರವಿಚಂದ್ರನ್ ಅಶ್ವಿನ್ ಆಸಿಸ್ ಗೆ ಕಡಿವಾಣ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಎರಡನೇ ದಿನದ ಮೊದಲ ಎಸೆತದಲ್ಲೇ ಮುಹಮ್ಮದ್ ಶಮಿ ವಿಕೆಟ್ ಪಡೆಯುವ ಮೂಲಕ ಆಸ್ಟ್ರೇಲಿಯಾ ವೇಗಿ ಹ್ಯಾಸೆಲ್ವುಡ್ ಭಾರತದ ಇನಿಂಗ್ಸ್ಗೆ ಮಂಗಳ ಹಾಡಿದರು. 62 ರನ್ನುಗಳಿಗೆ ಮೂರು ವಿಕೆಟ್ ಪಡೆದ ಹ್ಯಾಸೆಲ್ವುಡ್ ಯಶಸ್ವಿ ಬೌಲರ್ ಎನಿಸಿದರು. ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್ ಹಾಗೂ ನಾಥನ್ ಲ್ಯಾನ್ ತಲಾ ಎರಡು ವಿಕೆಟ್ ಪಡೆದರು. 250 ರನ್ನುಗಳ ಸ್ಪರ್ಧಾತ್ಮಕ ಮೊತ್ತದೊಂದಿಗೆ ಕಣಕ್ಕಿಳಿದ ಭಾರತ ಮೊದಲ ಸೆಷನ್ನಲ್ಲಿ ಎರಡು ಪ್ರಮುಖ ವಿಕೆಟ್ ಕೀಳುವ ಮೂಲಕ ತಿರುಗೇಟು ನೀಡಿತು.
ಮೊದಲ ಓವರ್ನಲ್ಲೇ ಅಪಾಯಕಾರಿ ಬ್ಯಾಟ್ಸ್ಮನ್ ಅರೋನ್ ಫಿಂಚ್ ಅವರ ವಿಕೆಟ್ ಕಬಳಿಸಿದ ಇಶಾಂತ್ ಶರ್ಮಾ ಭಾರತ ಪಾಳಯದಲ್ಲಿ ಸಂತಸ ಮೂಡಿಸಿದರು. ಟೆಸ್ಟ್ ಕ್ರಿಕೆಟ್ನಲ್ಲಿ ಫಿಂಚ್ ಶೂನ್ಯಕ್ಕೆ ಔಟ್ ಆಗಿರುವುದು ಇದೇ ಮೊದಲು. ಜತೆಗೆ ಟೆಸ್ಟ್ ಕ್ರಿಕೆಟ್ನಲ್ಲಿ ಫಿಂಚ್ ಮೊದಲ ಬಾರಿಗೆ ಬೌಲ್ಡ್ ಆದರು. ಉಸ್ಮಾನ್ ಖ್ವಾಜಾ ಮತ್ತು ಮಾರ್ಕ್ಯುಸ್ ಹ್ಯಾರಿಸ್ ಆಸ್ಟ್ರೇಲಿಯಾದ ಇನಿಂಗ್ಸ್ ಆಧರಿಸಿದರು. ಆದರೆ ಆಟದ ಲಯ ಕಂಡುಕೊಂಡಿದ್ದ ಹ್ಯಾರಿಸ್ (26) ಅವರನ್ನು ಬಲಿ ಪಡೆಯುವ ಮೂಲಕ ರವಿಚಂದ್ರನ್ ಅಶ್ವಿನ್, ಆಸ್ಟ್ರೇಲಿಯಾ ಓಟಕ್ಕೆ ಕಡಿವಾಣ ಹಾಕಿದರು. ಫಾರ್ವರ್ಡ್ ಶಾರ್ಟ್ಲೆಗ್ನಲ್ಲಿ ಮುರಳಿ ವಿಜಯ್ಗೆ ಸುಲಭ ಕ್ಯಾಚ್ ನೀಡಿದ ಹ್ಯಾರಿಸ್ ಪೆವಿಲಿಯನ್ ಹಾದಿ ಹಿಡಿದರು. ಬಳಿಕ ಶಾನ್ ಮಾರ್ಷ್(2) ಅಗ್ಗಕ್ಕೆ ಪೆವಿಲಿಯನ್ ಗೆ ಕಳುಹಿಸಿದ ಅಶ್ವಿನ್ ಭರವಸೆಯ ಆಟಗಾರ ಉಸ್ಮಾನ್ ಖ್ವಾಜಾ (22) ಅವರನ್ನು ಕೀಪರ್ ಗೆ ಕ್ಯಾಚ್ ಕೊಡಿಸುವ ಮೂಲಕ ಭಾರತೀಯ ಪಾಳೆಯದಲ್ಲಿ ಸಂತಸ ಮೂಡಿಸಿದರು.