ಕೋಚ್ ಹುದ್ದೆಗೆ ಪೊವಾರ್ ಮತ್ತೆ ಅರ್ಜಿ
ಮುಂಬೈ, ಡಿ.12: ಭಾರತ ಮಹಿಳಾ ಕ್ರಿಕೆಟ್ ತಂಡದ ಕೋಚ್ ಆಗಿ ನ.30ರಂದು ತಮ್ಮ ವಿವಾದಿತ ಅವಧಿಯನ್ನು ಮುಗಿಸಿದ್ದ ರಮೇಶ್ ಪೊವಾರ್ಗೆ ಟಿ20 ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ ಹಾಗೂ ಉಪನಾಯಕಿ ಸ್ಮತಿ ಮಂಧಾನಾ ಅವರಿಂದ ಭಾರೀ ಬೆಂಬಲ ಸಿಕ್ಕ ಕಾರಣ ಮತ್ತೆ ಕೋಚ್ ಹುದ್ದೆಗೆ ಮಂಗಳವಾರ ಅರ್ಜಿ ಸಲ್ಲಿಸಿದ್ದಾರೆ.
‘‘ಹೌದು ನಾನು ಇಂದು ಅರ್ಜಿ ಸಲ್ಲಿಸಿದ್ದು ನಿಜ. ಏಕೆಂದರೆ ಸ್ಮತಿ ಮತ್ತು ಹರ್ಮನ್ಪ್ರೀತ್ ನನ್ನ ಬೆಂಬಲಕ್ಕಿದ್ದಾರೆ. ನಾನು ಅರ್ಜಿ ಸಲ್ಲಿಸದೇ ಇರುವ ಮೂಲಕ ಅವರಿಗೆ ಅವಮಾನ ಆಗಲು ಬಿಡುವುದಿಲ್ಲ’’ಎಂದು ಭಾರತ ತಂಡದ ಮಾಜಿ ಸ್ಪಿನ್ನರ್, ಪೊವಾರ್ ಹೇಳಿದ್ದಾರೆ.
ಕಳೆದ ತಿಂಗಳು ವಿಶ್ವ ಟಿ-20 ಟೂರ್ನಿಯಲ್ಲಿ ಭಾರತ ಮಹಿಳಾ ತಂಡ ಸೆಮಿಫೈನಲ್ನಲ್ಲಿ ಇಂಗ್ಲೆಂಡ್ಗೆ ಸೋತ ಬಳಿಕ ಪೊವಾರ್ ಅವರ ಕೋಚ್ ಅವಧಿ ಕೊನೆಗೊಂಡಿತ್ತು. ಪೊವಾರ್ ಹಾಗೂ ಹರ್ಮನ್ಪ್ರೀತ್ ಒಳಗೊಂಡ ತಂಡದ ನಿರ್ವಹಣಾ ಮಂಡಳಿಯು ಮಹತ್ವದ ಸೆಮಿಫೈನಲ್ ಪಂದ್ಯಕ್ಕೆ ಹಿರಿಯ ಆಟಗಾರ್ತಿ ಮಿಥಾಲಿ ರಾಜ್ರನ್ನು ಕೈಬಿಟ್ಟಿದ್ದು ವಿವಾದ ಸೃಷ್ಟಿಸಿತ್ತು.
Next Story