ಪುರುಷರ ಡಬಲ್ಸ್: ಭಾರತದ ಅಭಿಯಾನ ಅಂತ್ಯ
ಮೆಲ್ಬೋರ್ನ್, ಜ.16: ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಭಾರತದ ಪುರುಷ ಡಬಲ್ಸ್ ಅಭಿಯಾನ ಮೊದಲ ಸುತ್ತಿನಲ್ಲೇ ಅಂತ್ಯ ಕಂಡಿದೆ. ಬುಧವಾರ ಇಲ್ಲಿ ನಡೆದ ಪಂದ್ಯದಲ್ಲಿ 15ನೇ ಶ್ರೇಯಾಂಕದ ಭಾರತದ ರೋಹನ್ ಬೋಪಣ್ಣ ಹಾಗೂ ದಿವಿಜ್ ಶರಣ್ ಜೋಡಿಯು ಶ್ರೇಯಾಂಕರಹಿತ ಸ್ಪೇನ್ನ ಜೋಡಿ ಪ್ಯಾಬ್ಲೊ ಕಾರೆನೊ ಬುಸ್ಟಾ ಹಾಗೂ ಗಿಲೆರ್ಮೊ ಗಾರ್ಸಿಯಾ ಲೊಪೆಝ್ ಎದುರು 1-6, 6-4, 5-7 ಸೆಟ್ಗಳ ಅಂತರದಿಂದ ಮಣಿಯಿತು. ಪುಣೆಯಲ್ಲಿ ನಡೆದ ಟಾಟಾ ಓಪನ್ ಟೂರ್ನಿಯನ್ನು ಜಯಿಸಿದ ಬಳಿಕ ಈ ಹೊಸ ಜೋಡಿಗೆ ಎದುರಾದ ಎರಡನೇ ನೇರ ಪ್ರಥಮ ಸುತ್ತಿನ ಸೋಲು ಇದಾಗಿದೆ. ಕಳೆದ ವಾರ ಸಿಡ್ನಿ ಟೆನಿಸ್ ಟೂರ್ನಿಯಲ್ಲಿ ಈ ಜೋಡಿ 16ರ ಸುತ್ತಿನಲ್ಲಿ ಸೋಲು ಅನುಭವಿಸಿತ್ತು. ಮತ್ತೊಂದೆಡೆ ತಮ್ಮ 24ನೇ ಆಸ್ಟ್ರೇಲಿಯನ್ ಓಪನ್ನಲ್ಲಿ ಸ್ಪರ್ಧಿಸುತ್ತಿರುವ ಭಾರತದ ಹಿರಿಯ ಆಟಗಾರ ಲಿಯಾಂಡರ್ ಪೇಸ್ ಹಾಗೂ ಜೊತೆಗಾರ ಮಿಗ್ವೆಲ್ ಎಂಜೆಲ್ ರೆಯಸ್-ವರೆಲಾ ಜೋಡಿಯು ಅಮೆರಿಕ ಮತ್ತು ನ್ಯೂಝಿಲೆಂಡ್ ಜೋಡಿ ಅಸ್ಟಿನ್ ಕ್ರಾಜಿಸೆಕ್ ಹಾಗೂ ಅರ್ಟಮ್ ಸಿಟಾಕ್ ಎದುರು 5-7, 6-7(4) ಸೆಟ್ಗಳ ಅಂತರದಿಂದ ಸೋಲು ಅನುಭವಿಸಿತು.
ಪ್ರಥಮ ಸುತ್ತಿನಲ್ಲೇ ಸೋಲು ಕಂಡ ಭಾರತದ ಇನ್ನೊಬ್ಬ ಆಟಗಾರ ಜೀವನ್ ನೆಡುಂಚೆಝಿಯನ್. ಅಮೆರಿಕದ ನಿಕೊಲಾಸ್ ಮೊನ್ರೊ ಜೊತೆಗೂಡಿ ಆಡಿದ ಅವರು, 6-4, 6-7(8), 5-7 ಸೆಟ್ಗಳ ಅಂತರದಿಂದ ಕೆವಿನ್ ಕ್ರಾವೆಟ್ಝ್ ಹಾಗೂ ನಿಕೊಲಾ ಮೆಕ್ಟಿಕ್ ಜೋಡಿಗೆ ಸೋತರು.