ಮೇರಿ ಕೋಮ್ ‘ಪುಮಾ’ ರಾಯಭಾರಿ
ಹೊಸದಿಲ್ಲಿ, ಫೆ.18: ಆರು ಬಾರಿಯ ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್ ಮೇರಿ ಕೋಮ್ ಅವರನ್ನು ಕ್ರೀಡಾ ಧಿರಿಸುಗಳ ದೈತ್ಯ ಕಂಪೆನಿ ‘ಪುಮಾ’ಗೆ 2 ವರ್ಷಗಳ ಅವಧಿಗೆ ಉತ್ಪನ್ನಗಳ ರಾಯಭಾರಿಯಾಗಿ ಸೋಮವಾರ ಹೆಸರಿಸಲಾಗಿದೆ.
‘ಮ್ಯಾಗ್ನಿಫಿಸೆಂಟ್ ಮೇರಿ’ ಎಂದು ಕರೆಯಲಾಗುವ ಮೇರಿ ಕೋಮ್, ಪುಮಾ ಕಂಪೆನಿಯ ಮಹಿಳಾ ತರಬೇತಿ ವಿಭಾಗದ ನೂತನ ಭಾರತೀಯ ರಾಯಭಾರಿಯಾಗಲಿದ್ದಾರೆ. ದೇಶದಲ್ಲಿ ಮಾರಾಟ ಪ್ರಚಾರಗಳಲ್ಲಿ ಕಂಪೆನಿಯ ಉತ್ಪನ್ನಗಳನ್ನು ಪ್ರತಿನಿಧಿಸಲಿದ್ದಾರೆ.
ಚಾಂಪಿಯನ್ ಬಾಕ್ಸರ್ ಹಾಗೂ ಸೂಪರ್ ಮಾಮ್ ಆಗಿರುವ ಮೇರಿ ಭಾರತದಲ್ಲಿ ಕೋಟ್ಯಂತರ ಮಹಿಳೆಯರಿಗೆ ಮಾದರಿಯಾಗಿದ್ದಾರೆ. ದೇಶಾದ್ಯಂತ ಮಹಿಳೆಯರ ಸಬಲೀಕರಣ ಹಾಗೂ ಅವರ ಗುರಿಗಳನ್ನು ಸಾಧಿಸಲು ‘ಪುಮಾ’ ಪ್ರೇರೇಪಣೆ ನೀಡಲಿದೆ. ಪುಮಾದ ಉದ್ದೇಶವನ್ನು ಮೇರಿ ಕೋಮ್ ಪ್ರಚುರಪಡಿಸಲಿದ್ದಾರೆ ಎಂದು ಹೇಳಿಕೆಯಲ್ಲಿ ಕಂಪೆನಿ ತಿಳಿಸಿದೆ.
ಒಪ್ಪಂದದ ಕುರಿತು ಮಾತನಾಡಿರುವ ಮೇರಿ ‘‘ಒಬ್ಬ ಮಹಿಳೆಯಾಗಿ, ತಾಯಿಯಾಗಿ ಜೀವನದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದೇನೆ. ನನ್ನ ಕುಟುಂಬ ಹಾಗೂ ತಂಡಕ್ಕೆ ಧನ್ಯವಾದ. ಪುಮಾ ಒಂದು ಕಂಪೆನಿಯಾಗಿ ಯಾವಾಗಲೂ ಮಹಿಳೆಯರಿಗೆ ಬೆಂಬಲ ಹಾಗೂ ಪ್ರೋತ್ಸಾಹ ನೀಡುತ್ತಿದೆ. ಇದು ನನಗೆ ಸೂಕ್ತವಾದ ಆಯ್ಕೆ’’ ಎಂದು ಹೇಳಿದ್ದಾರೆ.