‘ಭಾರತ್ ಆರ್ಮಿ’ಯ 8,000 ಅಭಿಮಾನಿಗಳು
ಐಸಿಸಿ ವಿಶ್ವಕಪ್ ಕ್ರಿಕೆಟ್
ಲಂಡನ್, ಮಾ.21: ಇಂಗ್ಲೆಂಡ್ನಲ್ಲಿ ನಡೆಯಲಿರುವ ಮುಂಬರುವ ವಿಶ್ವಕಪ್ನಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡವನ್ನು ಬೆಂಬಲಿಸಲು ‘ಭಾರತ್ ಆರ್ಮಿ’ಯ ಅಭಿಮಾನಿಗಳು ಸಿದ್ಧವಾಗಿದ್ದಾರೆ. ‘ಬರ್ಮಿ ಆರ್ಮಿ ರೀತಿಯಲ್ಲಿ ಸುಮಾರು 22 ದೇಶಗಳ ಕನಿಷ್ಠ 8,000 ಕ್ರಿಕೆಟ್ ಅಭಿಮಾನಿಗಳು ವಿಶ್ವಕಪ್ ವೇಳೆ ಇಂಗ್ಲೆಂಡ್ನಲ್ಲಿ ಒಗ್ಗೂಡಲಿದ್ದಾರೆ ಎಂದು ಅಂತರ್ರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ತಿಳಿಸಿದೆ. 1999ರಲ್ಲಿ ಲಂಡನ್ನಲ್ಲಿ ನಡೆದ ವಿಶ್ವಕಪ್ ವೇಳೆ ಕೇವಲ ನಾಲ್ಕು ಸದಸ್ಯರೊಂದಿಗೆ ಈ ತಂಡ ಆರಂಭವಾಗಿತ್ತು. ಈ ನಾಲ್ಕು ಜನರ ಪ್ರಯತ್ನದಿಂದ ಈಗ ಬೃಹದಾಕಾರವಾಗಿ ಬೆಳೆದು ನಿಂತಿದೆ. ಭಾರತ ಆಡುವ ಪ್ರತೀ ಪಂದ್ಯದಲ್ಲಿ ಈ ತಂಡದ 5,000-6,000 ಅಭಿಮಾನಿಗಳು ಗ್ಯಾಲರಿಯಲ್ಲಿದ್ದು ಕೊಹ್ಲಿ ಪಡೆಯನ್ನು ಬೆಂಬಲಿಸಿದ್ದಾರೆ. ‘‘ಇಂಗ್ಲೆಂಡ್ ಮೂಲದ ಬೆಂಬಲಿಗರಿಂದ ಭಾರತ್ ಆರ್ಮಿ ಬೆಳೆದು ನಿಂತಿದೆ. ಸ್ಥಳೀಯರ ಮುಂದಾಳತ್ವದಲ್ಲಿ ವಿಶ್ವದಾದ್ಯಂತ ಸದಸ್ಯರನ್ನು ಹೊಂದಿದೆ’’ ಎಂದು ತಂಡದ ಸ್ಥಾಪಕ ಸದಸ್ಯರಲ್ಲೊಬ್ಬರಾದ ರಾಕೇಶ್ ಪಟೇಲ್ ಹೇಳಿದ್ದಾರೆಂದು ಐಸಿಸಿ ತಿಳಿಸಿದೆ. ಭಾರತ ತಂಡವನ್ನು ಬೆಂಬಲಿಸಿ ಹಲವು ವರ್ಷಗಳಿಂದ ಪಟೇಲ್ ವಿಶ್ವದ ವಿವಿಧ ಕ್ರೀಡಾಂಗಣಗಳಿಗೆ ಸುತ್ತಾಡಿದ್ದಾರೆ.