ಕೋಲ್ಕತಾ ಎದುರು ಡೆಲ್ಲಿ ಜಯಭೇರಿ
ಧವನ್, ಪಂತ್ ಭರ್ಜರಿ ಬ್ಯಾಟಿಂಗ್
ಕೋಲ್ಕತಾ, ಎ.12: ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಆತಿಥೇಯ ಕೋಲ್ಕತಾ ನೈಟ್ ರೈಡರ್ಸ್ ತಂಡಗಳ ಮಧ್ಯೆ ಶುಕ್ರವಾರ ಇಲ್ಲಿಯ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆದ 26ನೇ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ 7 ವಿಕೆಟ್ಗಳಿಂದ ಜಯಿಸಿತು.
179 ರನ್ಗಳ ಗುರಿ ಬೆನ್ನಟ್ಟಿದ ಡೆಲ್ಲಿ 18.5 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 180 ರನ್ ಗಳಿಸಿತು.
ಡೆಲ್ಲಿ ಪರ ಶಿಖರ್ ಧವನ್ (97, 63 ಎಸೆತ, 11 ಬೌಂಡರಿ, 2 ಸಿಕ್ಸರ್ ) ಹಾಗೂ ಪೃಥ್ವಿ ಶಾ (14, 7 ಎಸೆತ, 2 ಸಿಕ್ಸರ್) ಮೊದಲ ವಿಕೆಟ್ ಜೊತೆಯಾಟದಲ್ಲಿ 32 ರನ್ ಸೇರಿಸಿದರು. ಪೃಥ್ವಿ ಮೊದಲ ವಿಕೆಟ್ ಆಗಿ ಪ್ರಸಿದ್ಧ ಕೃಷ್ಣ ಎಸೆತದಲ್ಲಿ ದಿನೇಶ್ ಕಾರ್ತಿಕ್ಗೆ ಕ್ಯಾಚ್ ನೀಡಿದರು. ಆ ಬಳಿಕ ಬ್ಯಾಟಿಂಗ್ಗೆ ಇಳಿದ ನಾಯಕ ಶ್ರೇಯಸ್ ಅಯ್ಯರ್ (6) ವೈಫಲ್ಯ ಅನುಭವಿಸಿದರು. ರಸೆಲ್ ಎಸೆತದಲ್ಲಿ ಕಾರ್ತಿಕ್ಗೆ ಕ್ಯಾಚ್ ನೀಡಿದರು. ರಿಷಭ್ ಪಂತ್ (46, 31 ಎಸೆತ, 4 ಬೌಂಡರಿ, 2 ಸಿಕ್ಸರ್) ಅರ್ಧಶತಕದ ಹೊಸ್ತಿಲಲ್ಲಿ ಎಡವಿದರು. ಆ ಬಳಿಕ ಕಾಲಿನ್ ಇನ್ಗ್ರಾಂ (14, 6 ಎಸೆತ, 1 ಬೌಂಡರಿ, 1 ಸಿಕ್ಸರ್ ) ಹಾಗೂ ಧವನ್ ಗೆಲುವಿನ ವಿಧಾನ ಪೂರೈಸಿದರು. ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತಾ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 178 ರನ್ ಗಳಿಸಿತ್ತು.
ಟಾಸ್ ಗೆದ್ದ ಡೆಲ್ಲಿ ತಂಡದ ನಾಯಕ ಶ್ರೇಯಸ್ ಅಯ್ಯರ್ ಫೀಲ್ಡಿಂಗ್ ಆಯ್ದುಕೊಂಡರು. ಆತಿಥೇಯ ತಂಡದ ಪರ ಬ್ಯಾಟಿಂಗ್ ಆರಂಭಿಸಿದ ಜೊ ಡೆನ್ಲಿ (0) ಹಾಗೂ ಶುಭಮನ್ ಗಿಲ್ (65, 39 ಎಸೆತ, 7 ಬೌಂಡರಿ, 2 ಸಿಕ್ಸರ್) ಜೋಡಿ ಇನಿಂಗ್ಸ್ನ ಮೊದಲ ಎಸೆತದಲ್ಲಿಯೇ ಬೇರ್ಪಟ್ಟಿತು. ಇಶಾಂತ್ ಎಸೆತದಲ್ಲಿ ಡೆನ್ಲಿ ಬ್ಯಾಟ್ಗೆ ತಾಗಿ ಶೀಘ್ರ ಒಳನುಗ್ಗಿದ ಚೆಂಡು ಆಫ್ಸ್ಟಂಪ್ನ್ನು ಎಗರಿಸಿತು. ಆ ಬಳಿಕ ಗಿಲ್ಗೆ ಜೊತೆಯಾದ ಕನ್ನಡಿಗ ರಾಬಿನ್ ಉತ್ತಪ್ಪ (28, 30 ಎಸೆತ, 4 ಬೌಂಡರಿ, 1 ಸಿಕ್ಸರ್) ನಿಧಾನವಾಗಿ ಇನಿಂಗ್ಸ್ ಕಟ್ಟತೊಡಗಿದರು. ಇವರಿಬ್ಬರೂ ಎರಡನೇ ವಿಕೆಟ್ಗೆ 63 ರನ್ ಸೇರಿಸಿದಾಗ ರಬಾಡ ಮೋಡಿ ಮಾಡಿದರು. ಬೌನ್ಸರ್ ಪ್ರಯೋಗಿಸಿದ ಅವರು, ಉತ್ತಪ್ಪ ಅವರನ್ನು ಪಂತ್ಗೆ ಕ್ಯಾಚ್ ನೀಡುವಂತೆ ಪ್ರೇರೇಪಿಸಿ ಡೆಲ್ಲಿ ಪಡೆಯಲ್ಲಿ ಸಂಭ್ರಮ ಉಕ್ಕಿಸಿದರು.
ಉತ್ತಪ್ಪ ವಿಕೆಟ್ ಪತನದ ಬಳಿಕ ಬಂದ ನಿತೀಶ್ ರಾಣಾ 12 ಎಸೆತಗಳಲ್ಲಿ 1 ಸಿಕ್ಸರ್ವುಳ್ಳ 11 ರನ್ ಗಳಿಸಿ ಕ್ರಿಸ್ ಮೊರಿಸ್ಗೆ ವಿಕೆಟ್ ಒಪ್ಪಿಸಿದರು. ಆ ಬಳಿಕ ಸ್ಫೋಟಕ ಹೊಡೆತಗಳ ಆಟಗಾರ ಆ್ಯಂಡ್ರೆ ರಸೆಲ್ (45, 21 ಎಸೆತ, 3 ಬೌಂಡರಿ, 4 ಸಿಕ್ಸರ್ ) ಅವರು ಗಿಲ್ಗೆ ಜೊತೆಯಾದರು. ರಸೆಲ್ ಕಾಲಿಟ್ಟ ಅಲ್ಪ ನಿಮಿಷಗಳ ಬಳಿಕ ಬಿರುಸಿನ ಆಟಕ್ಕೆ ಇಳಿದಿದ್ದ ಗಿಲ್ ಅವರು ಕೀಮೊ ಪಾಲ್ ಎಸೆತದಲ್ಲಿ ಅಕ್ಷರ್ ಪಟೇಲ್ಗೆ ಕ್ಯಾಚ್ ನೀಡಿ ಪೆವಿಲಿಯನ್ಗೆ ವಾಪಸಾದರು. ದಿನೇಶ್ ಕಾರ್ತಿಕ್ (2) ವಿಫಲರಾದರು. ಪಿಯೂಷ್ ಚಾವ್ಲಾ (14, 6 ಎಸೆತ, 2 ಬೌಂಡರಿ) ಕೊನೆಯಲ್ಲಿ ಮಿಂಚಿದರು.
ಡೆಲ್ಲಿ ಪರ ರಬಾಡ, ಪಾಲ್ ಹಾಗೂ ಮೊರಿಸ್ ತಲಾ 2 ವಿಕೆಟ್ ಪಡೆದರು.