2020ರ ಎಫ್ಐಎಚ್ ಪ್ರೊ ಲೀಗ್ಗೆ ಭಾರತ
ಹಿಂದಿನ ನಿರ್ಧಾರ ಬದಲಿಸಿದ ತಂಡ
ಹೊಸದಿಲ್ಲಿ, ಎ.16: ಎಫ್ಐಎಚ್ ಪೊ ಲೀಗ್ನಿಂದ ಹೊರಗುಳಿಯುವ ತನ್ನ ಈ ಹಿಂದಿನ ನಿರ್ಧಾರವನ್ನು ಬದಲಾಯಿಸಿರುವ ಭಾರತ ಹಾಕಿ ತಂಡ, 2020ರಿಂದ ಲೀಗ್ಗೆ ಸೇರಿಕೊಳ್ಳುವುದಾಗಿ ಮಂಗಳವಾರ ಅಂತರ್ರಾಷ್ಟ್ರೀಯ ಹಾಕಿ ಫೆಡರೇಶನ್ (ಎಫ್ಐಎಚ್) ಖಚಿತಪಡಿಸಿದೆ.
‘‘ಮುಂದಿನ ವರ್ಷದಿಂದ ಭಾರತ ಲೀಗ್ನಲ್ಲಿ ಪಾಲ್ಗೊಳ್ಳುತ್ತಿರುವುದು ಸಂತಸದ ಸಂಗತಿ. ಹಾಕಿ ಕ್ರೀಡೆಯ ಕುರಿತು ಭಾರೀ ಉತ್ಸಾಹ ಹೊಂದಿರುವ ಭಾರತ ನಮ್ಮ ನೂತನ ಟೂರ್ನಿಗೆ ಇನ್ನಷ್ಟು ಮೆರುಗು ತರಲಿದೆ’’ ಎಂದು ಎಫ್ಐಎಚ್ ಸಿಇಒ ಥಿಯರಿ ವೇಲ್ ಹೇಳಿದ್ದಾರೆ.
ಭಾರತ ಮರಳಿ ಹಾಕಿ ಲೀಗ್ಗೆ ಸೇರಿಕೊಂಡಿರುವ ನಿರ್ಧಾರವನ್ನು ಲೀಗ್ನಲ್ಲಿ ಭಾಗವಹಿಸುವ ಇತರ ರಾಷ್ಟ್ರಗಳು ಪೂರ್ಣಪ್ರಮಾಣದಲ್ಲಿ ಬೆಂಬಲಿಸಿವೆ ಎಂದು ಎಫ್ಐಎಚ್ ಹೇಳಿಕೊಂಡಿದೆ.
ಎಫ್ಐಎಚ್ ಪ್ರೋ ಲೀಗ್ನಲ್ಲಿ ವರ್ಷದಾದ್ಯಂತ ಪ್ರಮುಖ ರಾಷ್ಟ್ರಗಳ ತಮ್ಮ ತವರು ಹಾಗೂ ಇತರ ಸ್ಥಳಗಳಲ್ಲಿ ಪರಸ್ಪರ ಸ್ಪರ್ಧಿಸುತ್ತವೆ. ಒಲಿಂಪಿಕ್ಸ್ ಆರಂಭವಾಗುವ ವರ್ಷದಲ್ಲಿ ನಡೆದ ಸ್ಪರ್ಧೆಗಳಲ್ಲಿ ಅಗ್ರ 4 ಸ್ಥಾನ ಪಡೆಯುವ ತಂಡಗಳು ಒಲಿಂಪಿಕ್ಸ್ ಅರ್ಹತಾ ಪಂದ್ಯಗಳನ್ನು ಆಡುತ್ತವೆ. ಆದಾಗ್ಯೂ ಭಾರತ ಮಹಿಳಾ ತಂಡ ಭಾಗವಹಿಸುವ ಕುರಿತು ಎಫ್ಐಎಚ್ ಯಾವುದೇ ಹೇಳಿಕೆ ನೀಡಿಲ್ಲ. ಭಾರತ ವನಿತಾ ತಂಡ ಸದ್ಯ ಜನವರಿ 2019ರಿಂದ ಆರಂಭವಾಗಿರುವ ಉದ್ಘಾಟನಾ ಪ್ರೊ ಲೀಗ್ನಿಂದ ದೂರ ಉಳಿದಿದೆ.
ಹಾಕಿ ಸರಣಿಗಳ ಮೂಲಕ ಭಾರತ ಮಹಿಳಾ ಹಾಗೂ ಪುರುಷ ತಂಡಗಳು ಒಲಿಂಪಿಕ್ಸ್ಗೆ ಅರ್ಹತೆಯನ್ನು ಪಡೆಯುವ ಉತ್ತಮ ಅವಕಾಶ ಹೊಂದಿವೆ ಎಂದು ಆರಂಭದಲ್ಲಿ ಹಾಕಿ ಇಂಡಿಯಾ ನಂಬಿತ್ತು. ಆದರೆ ಈ ಸರಣಿಗಳಲ್ಲಿ ಭಾರತ ತಂಡಗಳು ನಿರ್ಣಾಯಕ ಅಂಕಗಳನ್ನು ಕಳೆದುಕೊಂಡವು. ಆದರೆ ಸದ್ಯ ಪ್ರೊ ಲೀಗ್ ಟೂರ್ನಿಯು ಹಾಕಿ ಸರಣಿಗಳಿಗಿಂತ ಹೆಚ್ಚಿನ ರ್ಯಾಂಕಿಂಗ್ ಪಾಯಿಂಟ್ಗಳ ಕೊಡುಗೆ ನೀಡಿದೆ. ಇದು ಉಭಯ ತಂಡಗಳು ಒಲಿಂಪಿಕ್ಸ್ ಕ್ವಾಲಿಫೈಯರ್ಸ್ ಅಥವಾ ಒಲಿಂಪಿಕ್ಸ್ ಕ್ವಾಲಿಫೈಯರ್ಸ್ ಡ್ರಾ ಗಳಿಗೆ ಪ್ರವೇಶಿಸಲು ನಿರ್ಣಾಯಕವಾಗಬಹುದು.
ಮುಂದಿನ ವರ್ಷದಿಂದ ಪ್ರೊ ಲೀಗ್ನಲ್ಲಿ ಇನ್ನಷ್ಟು ಸುಧಾರಣೆ ತರುವುದಾಗಿ ಎಫ್ಐಎಚ್ ತಿಳಿಸಿದೆ.