ಲಾಜೊವಿಕ್ ಸೆಮಿಫೈನಲ್ಗೆ
ಮೊಂಟೆ ಕಾರ್ಲೊ ಟೆನಿಸ್ ಟೂರ್ನಿ
ಮೊಂಟೆ ಕಾರ್ಲೊ (ಮೊನಾಕೊ), ಎ.19: ಇಟಲಿಯ ಲೊರೆಂರೊ ಸೊನೆಗೊ ಅವರನ್ನು 6-4, 7-5 ಸೆಟ್ಗಳಿಂದ ಮಣಿಸಿದ ಸರ್ಬಿಯ ಆಟಗಾರ ಡುಸಾನ್ ಲಾಜೊವಿಕ್ ಶುಕ್ರವಾರ ಮೊಂಟೆ ಕಾರ್ಲೊ ಟೂರ್ನಯ ಸೆಮಿಫೈನಲ್ಗೆ ಲಗ್ಗೆಯಿಟ್ಟಿದ್ದಾರೆ. ಕಳೆದವಾರ ಅನಾರೋಗ್ಯಕ್ಕೆ ಒಳಗಾಗಿದ್ದ ಅವರು ಶುಕ್ರವಾರ ತಮ್ಮ ಎಲ್ಲ ಶಕ್ತಿಯನ್ನು ಒಗ್ಗೂಡಿಸಿ ಎದುರಾಳಿ ಆಟಗಾರನ ವಿರುದ್ಧ ಪಾರಮ್ಯ ಮೆರೆದರು.
ರಶ್ಯದ ಡ್ಯಾನಿಲ್ ಮೆಡ್ವಡೆವ್ ವಿರುದ್ಧ ನಡೆಯುವ ಹಣಾಹಣಿಯಲ್ಲಿ ಒಂದು ವೇಳೆ ಸರ್ಬಿಯದ ಇನ್ನೋರ್ವ ಆಟಗಾರ ಅಗ್ರ ಶ್ರೇಯಾಂಕದ ಜೊಕೊವಿಕ್ ಜಯಿಸಿದರೆ ಲಾಜೊವಿಕ್ರನ್ನು ಸೆಮಿಫೈನಲ್ನಲ್ಲಿ ಎದುರಿಸುವ ಸಾಧ್ಯತೆಯಿದೆ.
11 ಬಾರಿಯ ಚಾಂಪಿಯನ್ ರಫೆಲ್ ನಡಾಲ್ ಅವರು ಅರ್ಜೆಂಟೀನದ ಗೈಡೊ ಪೆಲ್ಲಾ ವಿರುದ್ಧ ಕ್ವಾರ್ಟರ್ಫೈನಲ್ನಲ್ಲಿ ಸೆಣಸಾಡಲಿದ್ದಾರೆ.
ಗುರುವಾರ 2018ರ ಫ್ರೆಂಚ್ ಓಪನ್ ಫೈನಲಿಸ್ಟ್ ಡೊಮಿನಿಕ್ ಥೀಮ್ರನ್ನು ಮಣಿಸಿ ಲಾಜೊವಿಕ್ ಕ್ವಾರ್ಟರ್ಫೈನಲ್ ಪ್ರವೇಶಿಸಿದ್ದರು. ಕ್ವಾರ್ಟರ್ಫೈನಲ್ ಹಣಾಹಣಿಯಲ್ಲಿ ವಿಶ್ವದ ನಂ.96 ಆಟಗಾರ ಸೊನೆಗೊರ ಸರ್ವ್ ಮುರಿದ ಲಾಜೊವಿಕ್ ಜಯದ ಹಾದಿಕಂಡುಕೊಂಡರು.
ಮಾಸ್ಟರ್ಸ್ 1000 ಟೂರ್ನಿಯಲ್ಲಿ ಸರ್ಬಿಯದ ಇಬ್ಬರು ಆಟಗಾರರು (ಜೊಕೊವಿಕ್ ಹಾಗೂ ಲಾಜೊವಿಕ್) ಜೊತೆಯಾಗಿ ಕ್ವಾರ್ಟರ್ಫೈನಲ್ ಪ್ರವೇಶಿಸಿದ್ದು ಇದೇ ಮೊದಲ ಬಾರಿ.