ಪ್ರಿಕ್ವಾರ್ಟರ್ಫೈನಲ್ ಗೆ ರೋಹಿತ್, ದೀಪಕ್
ಏಶ್ಯನ್ ಚಾಂಪಿಯನ್ಶಿಪ್ ಬಾಕ್ಸಿಂಗ್
ಬ್ಯಾಂಕಾಕ್, ಎ.19: ಏಶ್ಯನ್ ಚಾಂಪಿಯನ್ಶಿಪ್ನ ಟೂರ್ನಿಯ ಆರಂಭದಲ್ಲೇ ಇಬ್ಬರು ಭಾರತೀಯ ಬಾಕ್ಸರ್ಗಳು ಶುಕ್ರವಾರ ಪ್ರಿಕ್ವಾರ್ಟರ್ಫೈನಲ್ ತಲುಪುವ ಮೂಲಕ ಉತ್ತಮ ಪ್ರದರ್ಶನ ನೀಡಿದ್ದಾರೆ.
ರಾಷ್ಟ್ರೀಯ ಚಾಂಪಿಯನ್ ದೀಪಕ್(49 ಕೆ.ಜಿ.) ಹಾಗೂ ರೋಹಿತ್ ಟೋಕಾಸ್ (64 ಕೆ.ಜಿ.) ಆತ್ಮವಿಶ್ವಾಸದ ಗೆಲುವಿನ ಮೂಲಕ 16ರ ಘಟ್ಟಕ್ಕೆ ಪ್ರವೇಶ ಪಡೆದ ಆಟಗಾರರಾಗಿದ್ದಾರೆ.
ರೋಹಿತ್ ಅವರು ತೈವಾನ್ನ ಚು ಯೆನ್ ಲಾಯ್ರನ್ನು ಒಂದೂ ಅಂಕ ಬಿಟ್ಟುಕೊಡದೆ ಬಗ್ಗುಬಡಿದರೆ, ದೀಪಕ್ ಕೂಡ ಅದೇ ಅಂತರದಿಂದ ವಿಯೆಟ್ನಾಂನ ಲೊಯ್ ಬ್ಯುಯ್ ಕಾಂಗ್ ಡಾನ್ರನ್ನು ಸೋಲಿಸಿದರು. ಪಂದ್ಯವನ್ನು ಅತೀ ಸುಲಭವಾಗಿತೆಗೆದುಕೊಂಡಂತೆ ಕಂಡುಬಂದ ದೀಪಕ್, ನೇರ ಹಾಗೂ ಪ್ರಭಾವಿ ಪಂಚ್ಗಳ ಮೂಲಕ ಗಮನಸೆಳೆದರು. ಇನ್ನು ಎದುರಾಳಿ ಡಾನ್ ಸುಲಭವಾಗಿ ಶರಣಾಗದಿದ್ದರೂ ಆಕ್ರಮಣಕಾರಿಯಾಗುವುದರಲ್ಲಿ ಕೊರತೆ ಎದುರಿಸಿದರು.
64 ಕೆ.ಜಿ. ವಿಭಾಗದಲ್ಲಿ ರೋಹಿತ್ ಟೋಕಾಸ್ ಅವರು ಲಾಯ್ ವಿರುದ್ದ ಆಕ್ರಮಣಕಾರಿಯಾಗಿ ಕಂಡುಬಂದು ಮುಂದಿನ ಸುತ್ತು ಪ್ರವೇಶಿಸಿದರು. ಮೂರು ಕಿಂಗ್ಸ್ ಕಪ್ ಕಂಚು ವಿಜೇತ ಭಾರತದ ಆಟಗಾರ, ಪಂದ್ಯಕ್ಕೆ ಸಿದ್ಧತೆ ಮಾಡಿಕೊಂಡಂತೆ ಕಾಣದಎದುರಾಳಿ ವಿರುದ್ಧ ಸಂಪೂರ್ಣ ಪ್ರಾಬಲ್ಯ ಮೆರೆದರು.