ಸತೀಶ್, ಸೋನಿಯಾ ಕ್ವಾರ್ಟರ್ ಫೈನಲ್ಗೆ
ಬ್ಯಾಂಕಾಕ್, ಎ.20: ಕಾಮನ್ವೆಲ್ತ್ ಗೇಮ್ಸ್ ಬೆಳ್ಳಿ ಪದಕ ವಿಜೇತ ಸತೀಶ್ ಕುಮಾರ್ (+91 ಕೆಜಿ), ಉದಯೋನ್ಮುಖ ತಾರೆ ಸೋನಿಯಾ ಚಾಹಲ್ (57 ಕೆಜಿ) ಇಲ್ಲಿ ನಡೆಯುತ್ತಿರುವಏಶ್ಯನ್ ಬಾಕ್ಸಿಂಗ್ ಚಾಂಪಿಯನ್ಶಿಪ್ನ ಮೊದಲ ದಿನ ತಮ್ಮ ಪಂದ್ಯಗಳಲ್ಲಿ ಗೆದ್ದು ಕ್ವಾರ್ಟರ್ಫೈನಲ್ಗೆ ತಲುಪಿದ್ದಾರೆ.
ಸತೀಶ್ ಅವರು ಇರಾನ್ನ ಇಮಾನ್ ರಮೆಝಾನ್ ಪೌರ್ಡೆಲಾವರ್ ಅವರನ್ನು ಸೋಲಿಸಿ ಎಂಟರ ಘಟ್ಟ ಪ್ರವೇಶಿಸಿದರೆ, ವಿಶ್ವ ಚಾಂಪಿಯನ್ಶಿಪ್ ಬೆಳ್ಳಿ ಪದಕ ವಿಜೇತೆಸೋನಿಯಾ ಅವರು ವಿಯೆಟ್ನಾಂನ ಯುಯಾನ್ ಡೊನ್ಹಾ ಅವರನ್ನು ಮಣಿಸಿದರು.
‘‘ಈ ಟೂರ್ನಿಯಲ್ಲಿ ಬಂಗಾರದ ಪದಕ ಗೆಲ್ಲುವ ಎಲ್ಲ ಸ್ಪರ್ಧಾಳುಗಳು ಈ ವರ್ಷದ ಸಪ್ಟೆಂಬರ್ನಲ್ಲಿ ನಡೆಯುವ ವಿಶ್ವ ಚಾಂಪಿಯನ್ಶಿಪ್ ತಂಡಗಳಲ್ಲಿ ಸ್ಥಾನ ಪಡೆಯುವರು’’ಎಂದು ಭಾರತೀಯ ಬಾಕ್ಸಿಂಗ್ ಹೈ ಪರ್ಫಾಮೆನ್ಸ್ ನಿರ್ದೇಶಕ ಸ್ಯಾಂಟಿಯಾಗೊ ನೇವಾ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದರು.
ಇದೇ ಟೂರ್ನಿಯ 2015ರ ಆವೃತ್ತಿಯಲ್ಲಿ ಕಂಚಿನ ಪದಕ ಗೆದ್ದಿದ್ದ ಸತೀಶ್, ಈ ಪಂದ್ಯದಲ್ಲಿ ಎದುರಾಳಿಯ ವಿರುದ್ಧ ಪ್ರಭಾವಿ ಪ್ರದರ್ಶನ ನೀಡಿ ಗಮನಸೆಳೆದರು. ಪಂದ್ಯವುಸಂಪೂರ್ಣವಾಗಿ ಏಕಪಕ್ಷೀಯವಾಗಿತ್ತು.
ಇನ್ನೊಂದೆಡೆ ಮಹಿಳಾ ಸ್ಪರ್ಧೆಯಲ್ಲಿ ಸೋನಿಯಾ ತಮ್ಮ ಎದುರಾಳಿಯ ವಿರುದ್ಧ 5-0 ಅಂಕಗಳ ಅಂತರದಿಂದ ಗೆದ್ದು ಬೀಗಿದರು.
ವಿಶ್ವದ 34 ದೇಶಗಳಿಂದ 100 ಮಹಿಳಾ ಹಾಗೂ 198 ಪುರುಷ ಬಾಕ್ಸರ್ಗಳು ಟೂರ್ನಿಯಲ್ಲಿ ಅಗ್ರಸ್ಥಾನ ಪಡೆಯಲು ಸೆಣಸಾಟ ನಡೆಸುತ್ತಿದ್ದಾರೆ. ಯಾವುದೇ ವಿವಾದಾತ್ಮಕತೀರ್ಪುಗಳ ಮರು ಪರಿಶೀಲನೆಗಾಗಿ ಬೌಟ್ ರಿವ್ಯೆ ಪದ್ಧತಿಯನ್ನು ಈ ಟೂರ್ನಿ ಒಳಗೊಂಡಿದೆ.