ಟಿ-20 ಕ್ರಿಕೆಟ್: ಸತತ 5 ಬಾರಿ ಶೂನ್ಯ ಸಂಪಾದಿಸಿದ ಟರ್ನರ್
ಮೊಹಾಲಿ, ಎ.23: ಆಸ್ಟ್ರೇಲಿಯದ ಆಲ್ರೌಂಡರ್ ಅಶ್ಟನ್ ಟರ್ನರ್ ಐಪಿಎಲ್ನಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದು, ಟಿ-20 ಕ್ರಿಕೆಟ್ನಲ್ಲಿ ಸತತ ಐದು ಬಾರಿ ಶೂನ್ಯಕ್ಕೆ ಔಟಾದ ಮೊದಲ ದಾಂಡಿಗ ಎನಿಸಿಕೊಂಡಿದ್ದಾರೆ.ಈ ಮೂಲಕ ಚುಟುಕು ಪಂದ್ಯದಲ್ಲಿ ಮುಜುಗರಕ್ಕೀಡಾಗುವ ದಾಖಲೆ ನಿರ್ಮಿಸಿದ್ದಾರೆ.
ಸೋಮವಾರ ಡೆಲ್ಲಿ ವಿರುದ್ಧ ಪಂದ್ಯದಲ್ಲಿ ತಾನೆದುರಿಸಿದ ಮೊದಲ ಎಸೆತದಲ್ಲೇ ಇಶಾಂತ್ ಶರ್ಮಾಗೆ ವಿಕೆಟ್ ಒಪ್ಪಿಸಿದರು. ಈ ಪಂದ್ಯದಲ್ಲಿ ಡೆಲ್ಲಿ 6 ವಿಕೆಟ್ಗಳ ಗೆಲುವು ಪಡೆದಿದೆ. 26ರ ಹರೆಯದ ಟರ್ನರ್ ಪ್ರಸ್ತುತ ನಡೆಯುತ್ತಿರುವ ಐಪಿಎಲ್ನಲ್ಲಿ 3 ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. ಇದಕ್ಕೂ ಮೊದಲು ಬಿಗ್ಬ್ಯಾಶ್ ಟ್ವೆಂಟಿ-20 ಟೂರ್ನಿಯಲ್ಲಿ ಪರ್ತ್ ತಂಡದ ಪರ ಹಾಗೂ ಫೆಬ್ರವರಿಯಲ್ಲಿ ಭಾರತ ವಿರುದ್ಧದ ಪಂದ್ಯದಲ್ಲಿ ಸೊನ್ನೆ ಸುತ್ತಿದ್ದರು.
50 ಓವರ್ ಮಾದರಿ ಕ್ರಿಕೆಟ್ನಲ್ಲಿ ಟರ್ನರ್ ಉತ್ತಮ ದಾಖಲೆ ಕಾಯ್ದಕೊಂಡಿದ್ದಾರೆ.ಆದಾಗ್ಯೂ ಅವರು ಇಂಗ್ಲೆಂಡ್ನಲ್ಲಿ ಮೇ 30 ರಂದು ಆರಂಭವಾಗುವ ವಿಶ್ವಕಪ್ನಲ್ಲಿ ಆಸ್ಟ್ರೇಲಿಯ ತಂಡದಿಂದ ಹೊರಗುಳಿದಿದ್ದಾರೆ. ಭಾರತ ವಿರುದ್ಧ ಮೊಹಾಲಿಯಲ್ಲಿ ನಡೆದಿದ್ದ 4ನೇ ಏಕದಿನ ಪಂದ್ಯದಲ್ಲಿ ಟರ್ನರ್ 43 ಎಸೆತಗಳಲ್ಲಿ 84 ರನ್ ಗಳಿಸಿದ್ದರು.