ಹೆಪ್ಟಾಥ್ಲಾನ್ನಲ್ಲಿ ಸ್ವಪ್ನಾ ಬರ್ಮನ್ಗೆ ಬೆಳ್ಳಿ
ಏಶ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್
ದೋಹಾ, ಎ.23: ಏಶ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಮಂಗಳವಾರ ಏಶ್ಯನ್ ಗೇಮ್ಸ್ ಚಾಂಪಿಯನ್ ಹಾಗೂ ಹಾಲಿ ಚಾಂಪಿಯನ್ ಸ್ವಪ್ನಾ ಬರ್ಮನ್ ಮಹಿಳೆಯರ ಹೆಪ್ಟಾಥ್ಲಾನ್ನಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು. ಚಿನ್ನದ ಪದಕದ ಸ್ಪರ್ಧಿಯಾಗಿದ್ದ ಜಿನ್ಸನ್ ಜಾನ್ಸನ್ ಪುರುಷರ 1,500 ಮೀ.ರೇಸ್ನಿಂದ ಹಿಂದೆಸರಿದಿದ್ದಾರೆ.
ಹೆಪ್ಟಾಥ್ಲಾನ್ನ ಏಳು ಸ್ಪರ್ಧೆಗಳಲ್ಲಿ 5993 ಸರಾಸರಿ ಅಂಕ ಗಳಿಸಿದ ಸ್ವಪ್ನಾ ಎರಡನೇ ಸ್ಥಾನ ಪಡೆದರು. ಉಜ್ಬೇಕಿಸ್ತಾನದ ಎಕಟೆರಿನಾ ವೊರ್ನಿನಾ(6198 ಅಂಕ)ಮೊದಲ ಸ್ಥಾನ ಪಡೆದಿದ್ದಾರೆ. ಸ್ಪರ್ಧೆಯಲ್ಲಿದ್ದ ಭಾರತದ ಇನ್ನೋರ್ವ ಅಥ್ಲೀಟ್ ಪೂರ್ಣಿಮಾ ಹೆಂಬ್ರಮ್ 5528 ಅಂಕ ಗಳಿಸಿ 5ನೇ ಸ್ಥಾನ ಪಡೆದರು. 2017ರ ಆವೃತ್ತಿಯ ಚಾಂಪಿಯನ್ಶಿಪ್ನಲ್ಲಿ ಚಾಂಪಿಯನ್ ಆಗಿದ್ದ ಸ್ವಪ್ನಾ ಕಳೆದ ಆವೃತ್ತಿಗಿಂತ ಹೆಚ್ಚು ಸರಾಸರಿ ಅಂಕ ಗಳಿಸಿದರು. ಆದರೆ, ಇದು ಕಳೆದ ವರ್ಷ ಏಶ್ಯನ್ ಗೇಮ್ಸ್ನಲ್ಲಿ ಗಳಿಸಿದ್ದ ಸರಾಸರಿ ಅಂಕ(6026)ಕ್ಕಿಂತ ಕಡಿಮೆಯಾಗಿದೆ.
ಸ್ವಪ್ನಾ ಬೆಳ್ಳಿ ಪದಕ ಜಯಿಸುವುದರೊಂದಿಗೆ ಭಾರತ ಟೂರ್ನಿಯಲ್ಲಿ 2 ಚಿನ್ನ, 4 ಬೆಳ್ಳಿ ಹಾಗೂ 5 ಕಂಚಿನ ಪದಕ ಜಯಿಸಿದಂತಾಗಿದೆ.
ಪಾರುಲ್ ಚೌಧರಿ ಮಹಿಳೆಯರ 3,000 ಮೀ. ಸ್ಟೀಪಲ್ಚೇಸ್ ಫೈನಲ್ನಲ್ಲಿ ವೈಯಕ್ತಿಕ ಶ್ರೇಷ್ಠ ಸಮಯ(10:03.43)ದಲ್ಲಿ ಗುರಿ ತಲುಪಿ ಐದನೇ ಸ್ಥಾನ ಪಡೆದರು. ಇದಕ್ಕೂ ಮೊದಲು ರೌಂಡ್-1 ಹೀಟ್ಸ್ ಆರಂಭಕ್ಕೆ ಕೆಲವೇ ಗಂಟೆಗಳ ಮೊದಲು ಸಣ್ಣಸ್ನಾಯು ಸೆಳೆತದಿಂದಾಗಿ ಓಟಗಾರ ಜಾನ್ಸನ್ 1500 ಮೀ. ಓಟದ ಸ್ಪರ್ಧೆಯಿಂದ ಹಿಂದೆ ಸರಿದರು. ಇದು ಭಾರತಕ್ಕೆ ತೀವ್ರ ಹಿನ್ನಡೆಯಾಗಿ ಪರಿಣಮಿಸಿತು. ಜಾನ್ಸನ್ ಸೋಮವಾರ ನಡೆದ 800 ಮೀ. ಓಟದ ಫೈನಲ್ನ್ನು ಪೂರ್ಣಗೊಳಿಸಿರಲಿಲ್ಲ. ಜಾನ್ಸನ್ ಈ ಹಿಂದೆ 800 ಮೀ. ಹಾಗೂ 1500 ಮೀ. ಓಟದಲ್ಲಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ.