ಹೆದರಾಬಾದ್ ಎದುರು ಚೆನ್ನೈ ಗೆಲುವಿನ ನಗೆ
►ಶತಕವಂಚಿತ ಶೇನ್ ವಾಟ್ಸನ್ ►ಮನೀಷ್ ಪಾಂಡೆ ಅರ್ಧಶತಕ ವ್ಯರ್ಥ
ಚೆನ್ನೈ, ಎ.23: ಇಲ್ಲಿನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ 41ನೇ ಐಪಿಎಲ್ ಪಂದ್ಯದಲ್ಲಿ ಆತಿಥೇಯ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಸನ್ರೈಸರ್ಸ್ ಹೈದರಾಬಾದ್ನ್ನು 6 ವಿಕೆಟ್ಗಳಿಂದ ಮಣಿಸಿದೆ.
ಹೈದರಾಬಾದ್ ನೀಡಿದ 176 ರನ್ ಗೆಲುವಿನ ಗುರಿ ಬೆನ್ನಟ್ಟಿದ ಚೆನ್ನೈ 19.5 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗೆದ್ದು ಸಂಭ್ರಮಿಸಿತು.
ಚೆನ್ನೈ ತಂಡದ ಆರಂಭ ಚೆನ್ನಾಗಿರಲಿಲ್ಲ. ತಂಡದ ಮೊತ್ತ 3 ರನ್ ಆಗಿದ್ದಾಗ ಫಾಫ್ ಡು ಪ್ಲೆಸಿಸ್(1) ಅವರು ದೀಪಕ್ ಹೂಡಾರಿಂದ ರನೌಟ್ ಆದರು. ಆ ಬಳಿಕ ಸುರೇಶ್ ರೈನಾ (38, 24 ಎಸೆತ, 6 ಬೌಂಡರಿ, 1 ಸಿಕ್ಸರ್) ಹಾಗೂ ಶೇನ್ ವಾಟ್ಸನ್( 96, 53 ಎಸೆತ, 9 ಬೌಂಡರಿ, 6 ಸಿಕ್ಸರ್) ಜೊತೆಯಾಗಿ ಮೂರನೇ ವಿಕೆಟ್ಗೆ 77 ರನ್ ಸೇರಿಸಿ ತಂಡಕ್ಕೆ ಚೇತರಿಕೆ ನೀಡಿದರು. ಲೆಗ್ಸ್ಪಿನ್ನರ್ ರಶೀದ್ಖಾನ್ ಅವರು ರೈನಾ ವಿಕೆಟ್ ಪಡೆದು ಮಿಂಚಿದರು.
ಆ ಬಳಿಕ ವಾಟ್ಸನ್ಗೆ ಅಂಬಟಿ ರಾಯುಡು (21, 25 ಎಸೆತ, 1 ಬೌಂಡರಿ)ಸಾಥ್ ನೀಡಿದರು. ವಾಟ್ಸನ್ ಕೊನೆಯಲ್ಲಿ ಕೇವಲ 4 ರನ್ಗಳಿಂದ ಶತಕವಂಚಿತರಾದರೂ ತಂಡವನ್ನು ಅದಾಗಲೇ ಗೆಲುವಿನ ಸಮೀಪಕ್ಕೆ ತಂದಿದ್ದರು. ಆ ಬಳಿಕ ಕೇದಾರ್ ಜಾಧವ್ (ಅಜೇಯ 11) ಹಾಗೂ ಬ್ರಾವೊ(ಅಜೇಯ 0) ಗೆಲುವಿನ ವಿಧಾನ ಪೂರ್ಣಗೊಳಿಸಿದರು.
ಚೆನ್ನೆ ಪರ ಹರ್ಭಜನ್ 39 ರನ್ ನೀಡಿ 2 ಅಮೂಲ್ಯ ವಿಕೆಟ್ ಪಡೆದರು. ಚಹಾರ್ಗೆ ಒಂದು ವಿಕೆಟ್ ದಕ್ಕಿತು. ಈ ಪಂದ್ಯದಲ್ಲಿ ಹೈದರಾಬಾದ್ ತಂಡದ ನಾಯಕತ್ವವನ್ನು ಕೇನ್ ವಿಲಿಯಮ್ಸನ್ ಅನುಪಸ್ಥಿತಿಯಲ್ಲಿ ವೇಗದ ಬೌಲರ್ ಭುವನೇಶ್ವರ ಕುಮಾರ್ ವಹಿಸಿದ್ದರು.